ನವದೆಹಲಿ: ಐತಿಹಾಸಿಕ ಸ್ಥಳಗಳು, ಶ್ರೀಮಂತ ಸಂಸ್ಕೃತಿ, ನೈಸರ್ಗಿಕ ಸೌಂದರ್ಯದಿಂದಲೇ ಮೋಡಿ ಮಾಡುವ ಹಲವು ತಾಣಗಳು ಉತ್ತರ ಭಾರತದಲ್ಲಿವೆ. ಇದು ಪ್ರವಾಸಿಗರ ಪಾಲಿನ ಸ್ವರ್ಗವೆಂದೇ ಜನಪ್ರಿಯ. ಉತ್ತರ ಭಾರತಕ್ಕೆ ಭೇಟಿ ನೀಡುವಾಗ ಪ್ರವಾಸ ಪಟ್ಟಿಯಲ್ಲಿಇರಬೇಕಾದ 10 ಪ್ರಮುಖ ಪ್ರವಾಸಿ ತಾಣಗಳ ಕುರಿತು ಮಾಹಿತಿ ಇಲ್ಲಿದೆ. ಇವು ಪ್ರಾಕೃತಿಕ ಸೌಂದರ್ಯ, ಆಧ್ಯಾತ್ಮಿಕತೆ ಸ್ಪರ್ಶ, ಕಲೆ, ವಾಸ್ತು ಶಿಲ್ಪದ ಪರಂಪರೆ, ಐತಿಹಾಸಿಕ ಘಟನೆಗಳ ನೆನಪುಗಳನ್ನು ಪ್ರವಾಸಿಗರ ಮುಂದೆ ತೆರೆದಿಡುತ್ತದೆ.
ಬೆಸಿಲಿಕಾ ಆಫ್ ಬೊಮ್ ಜೀಸಸ್ ಚರ್ಚ್-ಗೋವಾ

ಬರೊಕ್ ವಾಸ್ತುಶಿಲ್ಪ ಮತ್ತು ಪುರಾತನ ಮಹತ್ವಕ್ಕೆ ಹೆಸರುವಾಸಿಯಾಗಿರುವ ಗೋವಾದ ಬೆಸಿಲಿಕಾ ಆಫ್ ಬೊಮ್ ಜೀಸಸ್ ಚರ್ಚ್ ಪೋರ್ಚುಗೀಸ್ ಯುಗದ ಸಂತ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಅವರ ನೆನಪುಗಳನ್ನು ಹೊಂದಿದೆ. ಅತ್ಯಂತ ಸುಂದರವಾದ ಕಲಾಕೃತಿ ಮತ್ತು ಸಂಕೀರ್ಣವಾದ ವಿನ್ಯಾಸಗಳಿಂದ ಮೋಡಿ ಮಾಡುವ ಈ ಚರ್ಚ್ ಶ್ರೀಮಂತ ಇತಿಹಾಸವನ್ನು ಪ್ರತಿಬಿಂಬಿಸುತ್ತದೆ. ಇಲ್ಲಿಗೆ ಭೇಟಿ ನೀಡುವುದಾದರೆ ಹತ್ತಿರದಲ್ಲೇ ಮನೋಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ.
ತಾಜ್ ಮಹಲ್-ಉತ್ತರ ಪ್ರದೇಶ

ಚಕ್ರವರ್ತಿ ಷಹಜಹಾನ್ ತನ್ನ ಪತ್ನಿ ಮುಮ್ತಾಜ್‌ಗಾಗಿ ನಿರ್ಮಿಸಿದ ತಾಜ್ ಮಹಲ್ ಉತ್ತರ ಪ್ರದೇಶದ ಆಗ್ರಾದಲ್ಲಿದೆ. ಬಿಳಿ ಅಮೃತಶಿಲೆಯ ಸಮಾಧಿ ಸ್ಥಳವಾಗಿರುವ ಇದು ಪ್ರೀತಿಯ ಸಂಕೇತ ಮತ್ತು ಸಾಂಪ್ರದಾಯಿಕ ಮೊಘಲ್ ವಾಸ್ತುಶಿಲ್ಪ ಜನಪ್ರಿಯ. ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಸೇರ್ಪಡೆಯಾಗಿರುವ ಈ ತಾಣದಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ತಪ್ಪಿಸಿಕೊಳ್ಳದಿರಿ.
ಜೈಪುರ-ರಾಜಸ್ಥಾನ

ಗುಲಾಬಿ ನಗರ ಎಂದೇ ಖ್ಯಾತಿ ಪಡೆದ ರಾಜಸ್ಥಾನದ ಜೈಪುರವು 17ನೇ ಶತಮಾನದ ಹಳೆಯ ಅರಮನೆಗಳಿಗೆ ಹೆಸರುವಾಸಿ. ರಾಜಮನೆತನದ ಇತಿಹಾಸ ಮತ್ತು ಶ್ರೀಮಂತ ಸಂಸ್ಕೃತಿಯ ನೆಲೆಯಾಗಿರುವ ಇಲ್ಲಿನ ಹವಾ ಮಹಲ್ ಮತ್ತು ಭವ್ಯವಾದ ಅಂಬರ್ ಕೋಟೆ ಉತ್ತರ ಭಾರತದ ಎರಡು ಪ್ರಮುಖ ಆಕರ್ಷಣೆ.
ವಾರಾಣಸಿ-ಉತ್ತರ ಪ್ರದೇಶ

ಆಧ್ಯಾತ್ಮಿಕವಾಗಿ ಭಾರತದ ಹೃದಯ ಎಂದೇ ಪರಿಗಣಿಸಲ್ಪಟ್ಟಿರುವ ಉತ್ತರ ಪ್ರದೇಶದ ವಾರಾಣಸಿಯು ಗಂಗಾ ನದಿಯ ದಡದಲ್ಲಿದೆ. ಇಲ್ಲಿನ ಘಾಟ್‌ಗಳಲ್ಲಿ ಸಂಜೆ ನಡೆಯುವ ಗಂಗಾ ಆರತಿಯನ್ನಿ ವೀಕ್ಷಿಸಲು ಸಾವಿರಾರು ಬಂದಿ ಆಗಮಿಸುತ್ತಾರೆ. ಪ್ರಾಚೀನ ದೇವಾಲಯಗಳಿಂದ ಗುರುತಿಸಲ್ಪಟ್ಟ ಕಿರಿದಾದ ಹಾದಿಗಳಲ್ಲಿ ಹಾದು ಹೋಗುವುದು ಮನಸ್ಸನ್ನು ಸಂತೃಪ್ತಿಗೊಳಿಸುತ್ತದೆ.
ದೆಹಲಿ

ಪುರಾತನ ಪರಂಪರೆ ಮತ್ತು ಆಧುನಿಕತೆಯ ಮಿಶ್ರಣವಾಗಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೊಘಲ್ ರಾಜವಂಶದ ವಾಸ್ತುಶಿಲ್ಪದ ವೈಭವವನ್ನು ಸಾರುವ ಹಳೆಯ ಕೋಟೆ, ಹುಮಾಯೂನ್ ಸಮಾಧಿ, ಕುತುಬ್ ಮಿನಾರ್ ಪ್ರಮುಖ ಆಕರ್ಷಣೆ. ದೇಶದ ಐತಿಹಾಸಿಕ ಹೆಗ್ಗುರುತು ಇಂಡಿಯಾ ಗೇಟ್, ಕಮಲ ದೇವಾಲಯ ಮತ್ತು ಅಕ್ಷರಧಾಮ ದೇವಾಲಯ ಜತೆಗೆ ಶಾಪಿಂಗ್ ಪ್ರಿಯರಿಗೆ ಉತ್ಸಾಹ ತುಂಬುವ ಚಾಂದನಿ ಚೌಕ್ ಮತ್ತು ಆಹಾರ ಪ್ರಿಯರ ನೆಚ್ಚಿನ ಕನ್ನಾಟ್ ಪ್ಲೇಸ್ ಇಲ್ಲಿದೆ. ಶ್ರೀಮಂತ ಇತಿಹಾಸ ಮತ್ತು ವಿಶ್ವಮಾನವತೆಯನ್ನು ಸಾರುವ ದೆಹಲಿ ಉತ್ತರ ಭಾರತದ ಪ್ರವಾಸಿ ತಾಣಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ.
ಅಮೃತಸರ-ಪಂಜಾಬ್

ಹರ್ಮಂದಿರ್ ಸಾಹಿಬ್ ಎಂದು ಕರೆಯಲ್ಪಡುವ ಗೋಲ್ಡನ್ ಟೆಂಪಲ್ ಉತ್ತರ ಭಾರತದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ದೈವಿಕ ಪರಿಸರದೊಂದಿಗೆ ಶಾಂತ ಸ್ಥಳವಾಗಿರುವ ಇದು ಚಿನ್ನದ ಸ್ಮಾರಕಕ್ಕೆ ಹೆಸರುವಾಸಿ. 1919ರಲ್ಲಿ ಬ್ರಿಟಿಷರು ನಡೆಸಿದ ಹತ್ಯಾಕಾಂಡದ ಸ್ಮಾರಕ ಸ್ಥಳವಾದ ಜಲಿಯನ್ ವಾಲಾ ಬಾಗ್ ಕೂಡ ಇಲ್ಲಿದೆ. ವಾಘಾ ಗಡಿಯಲ್ಲಿ ನಡೆಯುವ ಸೈನಿಕರ ತಾಲೀಮು ಪ್ರವಾಸಿಗರನ್ನು ಸೆಳೆಯುತ್ತದೆ.
ಮನಾಲಿ-ಹಿಮಾಚಲ ಪ್ರದೇಶ

ಪ್ರಸಿದ್ಧ ಗಿರಿಧಾಮಗಳಿಗೆ ಹೆಸರುವಾಸಿಯಾಗಿರುವ ಹಿಮಾಚಲ ಪ್ರದೇಶದ ಮನಾಲಿ ಹಿಮದಿಂದ ಆವೃತವಾದ ಶಿಖರಗಳು ಮತ್ತು ಅರಣ್ಯ ಪ್ರದೇಶಗಳನ್ನು ಹೊಂದಿದೆ. ಇಲ್ಲಿನ ರೋಹ್ಟಾಂಗ್ ಪಾಸ್ ಮತ್ತು ಸೋಲಾಂಗ್ ಕಣಿವೆ ಸ್ಕೀಯಿಂಗ್, ಪ್ಯಾರಾಗ್ಲೈಡಿಂಗ್ ಮತ್ತು ಟ್ರೆಕ್ಕಿಂಗ್‌ಗೆ ಸೂಕ್ತ ತಾಣ. ಇಲ್ಲಿನ ವಿಶೇಷತೆ ಎಂದರೆ ಬಿಸಿನೀರಿನ ಬುಗ್ಗೆಗಳು. ಇಲ್ಲಿಗೆ ಸಮೀಪದಲ್ಲೇ ಹಿಡಿಂಬಾ ದೇವಿ ಮತ್ತು ಮನು ದೇವಸ್ಥಾನ ಇದೆ.
ಋಷಿಕೇಶ ಮತ್ತು ಹರಿದ್ವಾರ-ಉತ್ತರಾಖಂಡ

ಅವಳಿ ಆಧ್ಯಾತ್ಮಿಕ ನಗರಗಳು ಎಂದೇ ಖ್ಯಾತಿ ಪಡೆದ ಋಷಿಕೇಶ ಮತ್ತು ಹರಿದ್ವಾರ ಅನೇಕ ಯುಗಗಳಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ. ಇಲ್ಲಿನ ಆಶ್ರಮಗಳು, ಯೋಗ ವಿಶ್ರಾಂತಿ ಸ್ಥಳಗಳ ಜತೆಗೆ ವೈಟ್-ವಾಟರ್ ರಾಫ್ಟಿಂಗ್ ಮತ್ತು ಬಂಗೀ ಜಂಪಿಂಗ್‌ನಂತಹ ಸಾಹಸ ಕ್ರೀಡೆ ಹೆಸರುವಾಸಿ. ಪ್ರಸಿದ್ಧ ತೂಗು ಸೇತುವೆಗಳಾದ ಲಕ್ಷ್ಮಣ ಜೂಲಾ ಮತ್ತು ರಾಮ್ ಜೂಲಾ ಪ್ರವಾಸಿಗರನ್ನು ಮೋಡಿ ಮಾಡುತ್ತವೆ. ಘಾಟ್, ಹರ್ ಕಿ ಪೌರಿಯಲ್ಲಿ ಸಂಜೆ ಆರತಿಯನ್ನು ವೀಕ್ಷಿಸಲು ಪ್ರತಿ ದಿನ ಸಾವಿರಾರು ಭಕ್ತರು ಆಗಮಿಸುತ್ತಾರೆ.
ಶಿಮ್ಲಾ-ಹಿಮಾಚಲ ಪ್ರದೇಶ

ಗಿರಿಧಾಮಗಳ ರಾಣಿ ಎಂದೇ ಕರೆಯಲ್ಪಡುವ ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಉತ್ತರ ಭಾರತದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಇದು ಬೇಸಗೆಯ ರಾಜಧಾನಿಯಾಗಿತ್ತು. ಇಲ್ಲಿನ ಅನೇಕ ಬಂಗಲೆಗಳು ರಾಜವಂಶದ ಕಥೆಗಳನ್ನು ಇಂದಿಗೂ ಹೇಳುತ್ತಿವೆ. ದಿ ರಿಡ್ಜ್, ಮಾಲ್ ರೋಡ್, ಕ್ರೈಸ್ಟ್ ಚರ್ಚ್, ಐತಿಹಾಸಿಕ ಕಲ್ಕಾ- ಶಿಮ್ಲಾ ಆಟಿಕೆ ರೈಲು, ಕುಫ್ರಿ ಮತ್ತು ಚೈಲ್ ಇಲ್ಲಿನ ಆಕರ್ಷಕ ತಾಣಗಳು.
ಉದಯಪುರ-ರಾಜಸ್ಥಾನ

ಪೂರ್ವದ ವೆನಿಸ್ ಎಂದು ಕರೆಯಲ್ಪಡುವ ಉದಯಪುರವು ಸುಂದರ ಸರೋವರಗಳು ಮತ್ತು ಭವ್ಯ ಅರಮನೆಗಳಿಂದ ಆವೃತವಾದ ನಗರ. ಇಲ್ಲಿ ಪಿಚೋಲಾ ಸರೋವರವು ಭೇಟಿ ನೀಡಲೇಬೇಕಾದ ಸ್ಥಳವಾಗಿ ಗುರುತಿಸಿಕೊಂಡಿದೆ. ಹೃದಯ ಭಾಗದಲ್ಲಿರುವ ಲೇಕ್ ಪ್ಯಾಲೇಸ್, ಸಿಟಿ ಪ್ಯಾಲೇಸ್ ನೋಟವು ನಯನ ಮನೋಹರವಾಗಿದೆ. ರಾಜಸ್ಥಾನಿ ಮತ್ತು ಮೊಘಲ್ ವಾಸ್ತುಶಿಲ್ಪದಿಂದ ಮಿಶ್ರಣವಾಗಿರುವ ಜಗದೀಶ್ ದೇವಾಲಯ ಮತ್ತು ಜಗ್ ಮಂದಿರ ಕೂಡ ಪ್ರಮುಖ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದೆ. ಉದಯಪುರವು ನೈಸರ್ಗಿಕ ಸೌಂದರ್ಯ ಮತ್ತು ಶ್ರೀಮಂತ ಇತಿಹಾಸದ ಆಕರ್ಷಕ ಮಿಶ್ರಣವನ್ನು ಇಲ್ಲಿ ಕಾಣಬಹುದು.
ಲೇಹ್-ಲಡಾಖ್

ಲೇಹ್- ಲಡಾಖ್ ಭಾರತದ ಉತ್ತರದ ತುದಿಯ ಭಾಗವಾಗಿದೆ. ಇಲ್ಲಿನ ಹೆಮಿಸ್, ಥಿಕ್ಸೆ ಮತ್ತು ಡಿಸ್ಕಿಟ್ ಮಠಗಳು ಮನಃಶಾಂತಿಯನ್ನು ನೀಡುವ ತಾಣಗಳಾಗಿ ಪ್ರಸಿದ್ದಿ ಪಡೆದಿದೆ. ಪಾಂಗಾಂಗ್ ಸರೋವರ ಮತ್ತು ನುಬ್ರಾ ಕಣಿವೆ ಭೇಟಿ ನೀಡಲೇಬೇಕಾದ ಸ್ಥಳಗಳು. ವಿಶ್ವದ ಅತಿ ಎತ್ತರದ ರಸ್ತೆಗಳಲ್ಲಿ ವಾಹನ ಚಲಾಯಿಸುವ ಆನಂದವನ್ನು ಇಲ್ಲಿನ ಖಾರ್ದುಂಗ್ ಲಾ ಪಾಸ್‌ನಲ್ಲಿ ಪಡೆಯಬಹುದು.
