ಅಡಿಗಾಸ್ ಯಾತ್ರಾ

Adigas Yatra’s 32nd Anniversary: ಅಡಿಗಾಸ್‌ ಯಾತ್ರಾ ನೂತನ ಲಾಂಛನ, ನ್ಯೂಸ್‌ ವೆಬ್‌ ಸೈಟ್‌, ಯೂಟ್ಯೂಬ್‌ ಚಾನೆಲ್ ಅನಾವರಣ

ಬೆಂಗಳೂರು: ಪ್ರವಾಸೋದ್ಯಮ ವಲಯದಲ್ಲಿ ಮುಂಚೂಣಿಯಲ್ಲಿರುವ ಅಡಿಗಾಸ್‌ ಯಾತ್ರಾ ಸಂಸ್ಥೆಯ 32ನೇ ವಾರ್ಷಿಕೋತ್ಸವ ಅದ್ಧೂರಿಯಾಗಿ ಬೆಂಗಳೂರಿನಲ್ಲಿ ಭಾನುವಾರ (ಜ.18) ನೆರವೇರಿತು. ನಗರದ ಮೈಸೂರು ಬ್ಯಾಂಕ್‌ ಸರ್ಕಲ್‌ ಹತ್ತಿರ ಎಫ್‌ಕೆಸಿಸಿಐ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಡಿಗಾಸ್‌ ಯಾತ್ರಾ ಸಂಸ್ಥೆಯ ಹೊಸ ಲಾಂಛನ, ವೆಬ್‌ ಸೈಟ್‌ ಮತ್ತು ಯೂಟ್ಯೂಬ್‌‌ ಚಾನೆಲ್ ಲೋಕಾರ್ಪಣೆ ಮಾಡಲಾಯಿತು.

ಈ ವೇಳೆ ಮುಖ್ಯ ಅತಿಥಿ, ವಿಧಾನ ಪರಿಷತ್‌ ಸಭಾಪತಿಗಳಾದ ಬಸವರಾಜ ಹೊರಟ್ಟಿಯವರು ಮಾತನಾಡಿ, ಅಡಿಗಾಸ್‌ ಯಾತ್ರಾ ಕಳೆದ 32 ವರ್ಷಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಜನರಿಗೆ ಪ್ರವಾಸಗಳನ್ನು ಆಯೋಜಿಸಿರುವುದು ಅಸಾಧಾರಣ ಸೇವೆಯಾಗಿದೆ. ಯಾವುದೇ ಒಂದು ಸರಕಾರ ಮಾಡದಿರುವ ಕೆಲಸವನ್ನು ಈ ಸಂಸ್ಥೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

1984ರಲ್ಲಿ ತಮ್ಮ ವಿದೇಶ ಪ್ರವಾಸದ ನೆನಪುಗಳನ್ನು ಸ್ವಾರಸ್ಯಕರವಾಗಿ ವರ್ಣಿಸಿದ ಹೊರಟ್ಟಿಯವರು, ವಿದೇಶಗಳಲ್ಲಿ ಅನುಭವ ಇಲ್ಲದೆ ಪ್ರವಾಸ ಮಾಡುವವರಿಗೆ ಹಲವು ಸವಾಲುಗಳು ಎದುರಾಗಬಹುದು. ಅಂಥ ಸಂದರ್ಭದಲ್ಲಿ ಟೂರ್‌ ಆಪರೇಟರ್‌ ಸಂಸ್ಥೆಗಳ ಸೇವೆಗಳು ನೆರವಾಗುತ್ತವೆ. ಅಡಿಗಾಸ್‌ ಯಾತ್ರಾ ಸಂಸ್ಥೆಯಂತೂ ಶಾಲಾ ಮಕ್ಕಳನ್ನು ಕರೆದೊಯ್ಯುವಂತೆ ಅಚ್ಚುಕಟ್ಟಾಗಿ ದೇಶ-ವಿದೇಶಗಳ ಪ್ರವಾಸಗಳನ್ನು ಮಾಡಿ ತೋರಿಸುತ್ತದೆ ಎಂದರು. ಇವತ್ತು ಪ್ರವಾಸೋದ್ಯಮ ವಿಸ್ತಾರವಾಗಿದೆ. ಉತ್ತರ ಕರ್ನಾಟಕದಲ್ಲೂ ಸಾಕಷ್ಟು ಪ್ರವಾಸಿ ತಾಣಗಳು ಇವೆ. ಅಲ್ಲಿನ ಗ್ರಾಮೀಣ ಜನರಿಗೂ ಪ್ರವಾಸದ ರುಚಿಯನ್ನು ಕಲ್ಪಿಸಲು ಲಕ್ಷ್ಯ ವಹಿಸಿ ಎಂದು ಅಡಿಗಾಸ್‌ ಯಾತ್ರಾಗೆ ಅವರು ಸಲಹೆ ನೀಡಿದರು.

ಹರಿಹರದ ಹರಿಹರ ಪೀಠದ ಶ್ರೀ ವಚನಾನಂದ ಸ್ವಾಮಿಯವರು ಮಾತನಾಡಿ, ಜಗತ್ತು ಯೋಗದ ಕಡೆಗೆ ಆಕರ್ಷಿತವಾಗುತ್ತದೆ. ಆಧ್ಯಾತ್ಮಿಕ ಪ್ರವಾಸೋದ್ಯಮ ಬೆಳೆಯುತ್ತಿದೆ. ಅಡಿಗಾಸ್‌ ಯಾತ್ರೆ ಈ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಅಭಿನಂದನೀಯ ಎಂದರು.

ಪ್ರವಾಸಿಗರನ್ನು ಚೆನ್ನಾಗಿ ನೋಡಿಕೊಳ್ಳಿ: ಅದಿತಿ ಪ್ರಭುದೇವ

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಖ್ಯಾತ ನಟಿ ಅದಿತಿ ಪ್ರಭುದೇವ, ” 32 ವರ್ಷ ಟ್ರಾವೆಲ್‌ ಇಂಡಸ್ಟ್ರಿಯಲ್ಲಿ ಸೇವೆ ನೀಡುವುದು ದೊಡ್ಡ ಮಾತು. ದೇಶ ಸುತ್ತಬೇಕು, ಕೋಶ ಓದಬೇಕು ಎಂಬ ಮಾತಿದೆ. ಅದಕ್ಕೆ ಅನ್ವರ್ಥವಾಗುವಂತೆ ಅಡಿಗಾಸ್‌ ಯಾತ್ರಾ ಸೇವೆ ನೀಡುತ್ತಿರುವುದು ಸ್ವಾಗತಾರ್ಹ. ಪ್ರವಾಸ ಮಾಡುವುದರಿಂದ ಬದುಕಿನ ಬಗ್ಗೆ ಜ್ಞಾನ ಹೆಚ್ಚುತ್ತದೆ. ಬೇರೆ ಬೇರೆ ದೇಶಗಳನ್ನು ಭೇಟಿಯಾದಾಗ ಅಲ್ಲಿನ ಸ್ವಚ್ಛತೆ, ನೈರ್ಮಲ್ಯ ಕಂಡು ನಮ್ಮಲ್ಲಿ ಇದರ ಕೊರತೆ ಇದೆ ಎನ್ನಿಸುತ್ತದೆ. ಬೇಸರವಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಅದ್ಭುತ ವಾತಾವರಣ ಇದೆ. ಬೇರೆ ದೇಶಗಳಲ್ಲಿ ಒಂದಿಲ್ಲೊಂದು ಸಮಸ್ಯಾತ್ಮಕ ವಾತಾವರಣವಿದೆ. ಒಂದೋ ಅತಿಯಾದ ಶೀತ ಹವಾಮಾನ, ಈಲ್ಲವೇ ಅತಿಯಾದ ಉಷ್ಣತೆ. ಆದರೆ ಭಾರತದಲ್ಲಿ ಸಮತೋಲನದ ಹವಾಮಾನ ಇದೆ. ಅದರಲ್ಲೂ ಕರ್ನಾಟಕವಂತೂ ಅತ್ಯುತ್ತಮ. ನಾವು ಪ್ರವಾಸಿರಗರನ್ನು ಆದರ, ಪ್ರೀತಿ, ಗೌರವದಿಂದ ಸತ್ಕರಿಸಬೇಕು. ಅಂಥ ಸಂಸ್ಕೃತಿ ಹೆಚ್ಚಬೇಕುʼʼ ಎಂದು ತಿಳಿಸಿದರು.

ಅಡಿಗರು ಸ್ವತಃ ಪ್ರವಾಸಿಗರು: ವಿಶ್ವೇಶ್ವರ ಭಟ್

” ಅಡಿಗಾಸ್‌ ಯಾತ್ರಾದ ಸ್ಥಾಪಕ ನಾಗರಾಜ್‌ ಅಡಿಗ ಅವರು ಸ್ವತಃ ಉತ್ತಮ ಪ್ರವಾಸಿಗರು. ಹೀಗಾಗಿ ಉದ್ಯಮ ಅವರಿಗೆ ಒಲಿದಿದೆ. ವಿಶ್ವವಾಣಿಯಿಂದ ಟೂರ್‌ ಆಯೋಜಿಸಿದ್ದಾಗಲೂ ಅವರು ಭಾಗವಹಿಸಿದ್ದರು. ಟ್ರಾವೆಲ್ಸ್‌ ಕುರಿತು ಹೊಸ ವಿಚಾರಗಳನ್ನು ಕಲಿಯುವುದು, ಅನುಷ್ಠಾನಗೊಳಿಸುವುದು ಅವರಿಗೆ ಅತ್ಯಂತ ಪ್ರಿಯ. ಇದು ಅವರ ಯಶಸ್ಸಿಗೆ ಕಾರಣವಾಗಿದೆ. ಟೂರ್‌ ಆಪರೇಟರ್‌ ಅನ್ನೋದು ಕ್ರೂಡ್‌ ಆಗುತ್ತದೆ. ವಾಸ್ತವವಾಗಿ ಅವರು ಟೂರ್‌ ಗೈಡ್.‌ ಫೆಸಿಲಿಟೇಟರ್‌ ಕೂಡ ಆಗಿರುತ್ತಾರೆ. ಮನೆಯ ಯಜಮಾನ ಇದ್ದಹಾಗೆ. ಯಾವುದೋ ಊರಿನಲ್ಲಿ ಪ್ರವಾಸ ಹೋಗಿದ್ದಾಗ ಯಾರಾದರೂ ಅಸೌಖ್ಯಗೊಂಡರೆ ತಕ್ಷಣ ಔಷಧ ವ್ಯವಸ್ಥೆ ಮಾಡಿಕೊಡುತ್ತಾರೆ. ಪ್ರವಾಸಿಗರಿಗೆ ಅವರು ಯೋಚಿಸಿಯೇ ಇರದ ತಾಣಗಳನ್ನು ಪರಿಚಯಿಸುತ್ತಾರೆ. ಜನರಿಗೆ ಉತ್ತಮ ಅನುಭವವನ್ನು ಕಟ್ಟಿಕೊಡುತ್ತಾರೆ. ಹೀಗಾಗಿ ಇದು ಜವಾಬ್ದಾರಿಯುತ ಕೆಲಸ. ಎಲ್ಲರನ್ನೂ ಸಮಾಧಾಪಡಿಸಲೂ ಆಗುವುದಿಲ್ಲ, ಆದರೆ ಇದು ಸುಲಭದ ಮಾತಲ್ಲ, ವೀಸಾದಿಂದ ಶುರುವಾಗಿ ಮನೆ ತಲುಪುವ ತನಕ ಯಾವುದೋ ಕಷ್ಟ, ನೋವುಗಳು ಎದುರಾಗಬಹುದು, 50 ಮಂದಿಯಲ್ಲಿ 49 ಮಂದಿ ಸರಿಯಾದ ಸಮಯಕ್ಕೆ ಬಂದರೂ, ಒಬ್ಬರು ವಿಳಂಬ ಮಾಡುತ್ತಾರೆ. ಹಾಗೂ ಅವರೊಬ್ಬರಿಂದಲೇ ಉಳಿದ 49 ಮಂದಿಗೆ ತೊಂದರೆಯಾಗುತ್ತದೆ. ಆದ್ದರಿಂದ ಮೂರು ಲಕ್ಷಕ್ಕೂ ಹೆಚ್ಚು ಮಂದಿಗೆ ಅಡಿಗರು ಪ್ರವಾಸ ಸೇವೆ ಒದಗಿಸಿರುವುದು ಅಚ್ಚರಿದಾಯಕ ಸಂಗತಿʼʼ ಎಂದು ವಿಶ್ವವಾಣಿಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ ಅವರು ವಿವರಿಸಿದರು.

ಈಗ ಎಐ ತಂತ್ರಜ್ಞಾನ, ಚಾಟ್‌ ಜಿಪಿಟಿ, ಆನ್‌ಲೈನ್‌ ಟ್ರಾವೆಲ್‌ ಪ್ರೋಗ್ರಾಮ್‌ಗಳು ಬಂದಿರಬಹುದು. ಆದರೆ ಟೂರ್‌ ಆಪರೇಟರ್‌ಗಳ ಆಪ್ತತೆ ಇಲ್ಲಿ ಇರುವುದಿಲ್ಲ. ಆದ್ದರಿಂದ ಇದಕ್ಕೆ ಯಾವತ್ತೂ ಬೇಡಿಕೆ ಇದ್ದೇ ಇರುತ್ತದೆ. ಕೋವಿಡ್‌ ಬಳಿಕ ಹೋಟೆಲ್‌, ಏರ್‌ಲೈನ್ಸ್‌ ಮತ್ತು ಅದಕ್ಕೆ ಪೂರಕವಾಗಿ ಪ್ರವಾಸೋದ್ಯಮ ಬೆಳೆಯುತ್ತಿದೆ. ಪ್ರವಾಸವು ಓದಿಗಿಂತ ಮಿಗಿಲಾದ ಅನುಭವವನ್ನು ಕೊಡುತ್ತದೆ. ಟೂರ್‌ ಆಪರೇಟರ್‌ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಬೇಕು. ಇತ್ತೀಚೆಗೆ ಓವರ್‌ ಟೂರಿಸಂ ಆಗುತ್ತಿದೆ. ಎಲ್ಲಿ ಹೋದರೂ ಜನಜಂಗುಳಿ. ಜನ ದಟ್ಟಣೆಯ ಅನುಭವ. ಜೋಗಕ್ಕೆ ಹೋದಾಗಲೂ, ನಯಾಗರಕ್ಕೆ ತೆರಳಿದಾಗಲೂ ಜನ ಮೊಬೈಲ್‌ ಮೂಲಕ ಕ್ಲಿಕ್ಕಿಸುವುದರಲ್ಲೇ ಎಲ್ಲ ಸಮಯ ಕಳೆಯುತ್ತಾರೆ. ನಿಜಕ್ಕೂ ನಿಸರ್ಗವನ್ನು ಆಸ್ವಾದಿಸಲು ಮರೆಯುತ್ತಾರೆ. ಹೀಗಾಗದಂತೆ ಟೂರ್‌ ಆಪರೇಟರ್‌ಗಳು ಜನ ಜಾಗೃತಿಯನ್ನು ಮೂಡಿಸಬೇಕು ಎಂದರು.

ಅಡಿಗಾಸ್‌ ಯಾತ್ರಾ ಕರ್ನಾಟಕದ ಹೆಮ್ಮೆ: ರಾಧಾಕೃಷ್ಣ ಹೊಳ್ಳ

ಕರ್ನಾಟಕ ಟ್ರಾವೆಲ್‌ ಆಪರೇಟರ್ಸ್ ಅಸೋಸಿಯೇಶನ್‌ ಅಧ್ಯಕ್ಷರಾದ ಕೆ. ರಾಧಾಕೃಷ್ಣ ಹೊಳ್ಳ ಅವರು ಮಾತನಾಡಿ, ಇದುವರೆಗೆ ಮೂರು ಲಕ್ಷಕ್ಕೂ ಹೆಚ್ಚು ಪ್ರವಾಸಿಗರನ್ನು ದೇಶ-ವಿದೇಶಗಳ ಪ್ರವಾಸಕ್ಕೆ ಕರೆದುಕೊಂಡು ಹೋಗಿರುವ ಅದ್ಭುತ ಸೇವೆಯನ್ನು ಅಡಿಗಾಸ್‌ ಯಾತ್ರಾ ನೀಡಿರುವುದು ವಿಶೇಷ. ಕರಾವಳಿ ಮೂಲದ ಉದ್ಯಮಿ ನಾಗರಾಜ್‌ ಅಡಿಗ ಅವರು ಈ ಮೂಲಕ ಪ್ರವಾಸೋದ್ಯಮದಲ್ಲಿ ಛಾಪು ಮೂಡಿಸಿದ್ದಾರೆ. ಅಡಿಗಾಸ್‌ ಯಾತ್ರಾ ಕರ್ನಾಟಕದ ಹೆಮ್ಮೆಯ ಟ್ರಾವೆಲ್‌ ಸಂಸ್ಥೆಯಾಗಿದೆ ಎಂದು‌ ಹೇಳಿದರು.

ಕೇಂದ್ರ ಸರಕಾರವು ಅಡಿಗಾಸ್‌ ಯಾತ್ರಾಗೆ ಉತ್ತಮ ಸೇವಾ ಪೂರೈಕೆದಾರ ಎಂಬ ಮಾನ್ಯತೆ ನೀಡಿದೆ. ಆದರೆ ಉತ್ತಮ ಸೇವೆ ನೀಡುವ ಮೂಲಕ ಆ ಹಿರಿಮೆಯನ್ನು ಅಡಿಗಾಸ್‌ ಯಾತ್ರಾ ಉಳಿಸಿಕೊಂಡಿರುವುದು ಗಮನಾರ್ಹ. ದೇಶೀಯ ಟೂರಿಸಂನಲ್ಲಿ ಅಡಿಗಾಸ್‌ ಅತ್ಯಂತ ಗುಣಮಟ್ಟ ಸೇವೆ ನೀಡಿರುವುದರಿಂದ ಈ ಸಾಧನೆ ಸಾಧ್ಯವಾಗಿದೆ ಎಂದರು.

ದೇಶದಲ್ಲಿ ಟೂರಿಸಂ ಕೈಗೆಟಕುವ ದರದಲ್ಲಿ ಜನ ಸಾಮಾನ್ಯರಿಗೆ ಸಿಗುವಂತಾಗಬೇಕು. ಇವತ್ತು ಥಾಯ್ಲೆಂಡ್‌, ಇಂಡೊನೇಷ್ಯಾಗೆ ಕಡಿಮೆ ದರದಲ್ಲಿ ಹೋಗಿ ಬರಬಹುದು. ಆದರೆ ನಮ್ಮದೇ ಸ್ಥಳೀಯ ತಾಣಗಳಿಗೆ ಅದಕ್ಕಿಂತ ಹೆಚ್ಚು ದುಬಾರಿಯಾಗುತ್ತದೆ. ಆದ್ದರಿಂದ ದೇಶೀಯ ಟೂರಿಸಂ ಅಗ್ಗವಾಗಬೇಕು ಎಂದರು.

ಅಡಿಗಾಸ್ ಯಾತ್ರಾ ಸಂಸ್ಥಾಪಕರಾದ ನಾಗರಾಜ ಅಡಿಗ ಅವರು ಸ್ವಾಗತಿಸಿದರು. ಆಶಾ ಅಡಿಗ ಅವರು ವಂದಿಸಿದರು. ಅದ್ಧೂರಿ ಸಮಾರಂಭದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

Related posts

ಟೂರ್‌ ಆಪರೇಟರ್‌ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಬೇಕು: ವಿಶ್ವೇಶ್ವರ ಭಟ್‌

Adigas Yatra

ವಿದೇಶ ಸುತ್ತಲು ಸಾಧ್ಯವಾಗದಿದ್ರೆ ಸ್ವದೇಶ ನೋಡಿ: ಪ್ರವಾಸಿಗರಿಗೆ ಸೂಪರ್ ಆಫರ್‌ ಕೊಟ್ಟ ನಾಗರಾಜ್‌ ಅಡಿಗ

Adigas Yatra

Karnataka Budget 2026: ಬಜೆಟ್‌ನಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿದ್ದಕ್ಕೆ ಅಡಿಗಾಸ್‌ ಯಾತ್ರಾ ಸ್ವಾಗತ

Adigas Yatra

This message appears for Admin Users only:
Please fill the Instagram Access Token. You can get Instagram Access Token by go to this page