ಬೆಂಗಳೂರು: ಕಲೆ, ವಾಸ್ತುಶಿಲ್ಪ, ಸಂಸ್ಕೃತಿ ಮತ್ತು ಆಹಾರದ ವಿಷಯಕ್ಕೆ ಬಂದಾಗ ಇಟಲಿ ದೇಶವು ಜಗತ್ತಿಗೆ ದಾರಿ ತೋರಿದ ದೇಶವೆಂದು ಹೇಳಬಹುದು. ರೋಮನ್ ಇತಿಹಾಸದಿಂದ ಲಿಯೋನಾರ್ಡೊ ಡಾ ವಿನ್ಸಿಯಂತಹ ಮಹಾನ್ ಕಲಾವಿದರ ತನಕ, ಓಪೆರಾ ಸಂಗೀತದಿಂದ ಪಿಜ್ಜಾ–ಪಾಸ್ತಾ ರುಚಿವರೆಗೆ, ಇಟಲಿ ಎಲ್ಲರ ಮನಸ್ಸನ್ನು ಸೆಳೆಯುತ್ತದೆ.
ಪ್ರಾಚೀನ ನಗರಗಳು, ಅದ್ಭುತ ನೈಸರ್ಗಿಕ ಸೌಂದರ್ಯ, ಪ್ರಶಾಂತ ಸರೋವರಗಳು, ಪರ್ವತಗಳು, ಬೆಟ್ಟ-ಗುಡ್ಡಗಳು ಇತ್ಯಾದಿ ವೈವಿಧ್ಯಮಯ ಅನುಭವಗಳಿಗಾಗಿ ಪ್ರಸಿದ್ಧವಾದ ಈ ದೇಶದಲ್ಲಿ ಭೇಟಿ ನೀಡಬೇಕಾದ ಅನೇಕ ಅತ್ಯುತ್ತಮ ತಾಣಗಳಿವೆ. ನಿಮ್ಮ ಪ್ರಯಾಣಕ್ಕೆ ಸೂಕ್ತ ಆರಂಭವಾಗುವಂತಹ ಇಟಲಿಯ ಅತ್ಯುತ್ತಮ ಪ್ರವಾಸಿ ಸ್ಥಳಗಳ ಪಟ್ಟಿ ಇಲ್ಲಿದೆ.
ರೋಮ್
ಇತಿಹಾಸದ ಆಳವನ್ನು ತಿಳಿದುಕೊಳ್ಳಲು ಬಯಸುವಿರಾದರೆ ರೋಮ್ ಅತ್ಯುತ್ತಮ ನಗರವಾಗಿದೆ. ಕ್ಯಾಥೋಲಿಕ್ ಚರ್ಚ್‌ನ ನೆಲೆಯಾಗಿ ಬೇರೂರಿರುವ ಈ ನಗರವು, ಪ್ರಾಚೀನ ರೋಮನ್ ಸಾಮ್ರಾಜ್ಯದ ಕೇಂದ್ರವಾಗಿತ್ತು. ಸಾವಿರಾರು ವರ್ಷಗಳಿಗಿಂತಲೂ ಹೆಚ್ಚಿನ ಕಾಲದ ಕಲಾ–ವಾಸ್ತುಶಿಲ್ಪದ ಪ್ರಮುಖ ಭಂಡಾರವನ್ನು ತನ್ನೊಳಗೆ ಸಂಗ್ರಹಿಸಿಕೊಂಡಿದೆ. ಪ್ಯಾಂಥಿಯನ್, ರೋಮನ್ ಫೋರಮ್, ಕೊಲೊಸಿಯಂ, ಸಿಸ್ಟಿನ್ ಚಾಪೆಲ್‌ಗಳಂತಹ ಐತಿಹಾಸಿಕ ಸ್ಮಾರಕಗಳು ರೋಮ್‌ಗೆ ವಿಶಿಷ್ಟ ಮಹತ್ವವನ್ನು ನೀಡುತ್ತವೆ. ಇಟಲಿಗೆ ಮೊದಲ ಬಾರಿಗೆ ಭೇಟಿ ನೀಡುವವರಾಗಿದ್ದರೆ, ರೋಮ್ ಅನ್ನು ಖಂಡಿತ ನೋಡಲೇಬೇಕು.

ಟಸ್ಕನಿ
ಪುನರುಜ್ಜೀವನ (Renaissance) ಕಲೆಯ ಹೃದಯಭಾಗವಾಗಿರುವ ಟಸ್ಕನಿಯು ಕಲೆ, ಇತಿಹಾಸ ಮತ್ತು ನೈಸರ್ಗಿಕ ಸೌಂದರ್ಯದ ಅಪೂರ್ವ ಸಂಯೋಜನೆಯಾಗಿದೆ. ಫ್ಲೊರೆನ್ಸ್ ನಗರದ ಮ್ಯೂಸಿಯಂಗಳು ಮತ್ತು ಭವ್ಯ ವಾಸ್ತುಶಿಲ್ಪಗಳು ಕಣ್ಣಿಗೆ ನೋಡುವುದೇ ಒಂದು ಹಬ್ಬವಾಗಿದ್ದು, ಮೈಕೆಲಾಂಜೆಲೊ, ಲಿಯೋನಾರ್ಡೊ ಡಾ ವಿನ್ಸಿ ಮೊದಲಾದ ಮಹಾನ್ ಕಲಾವಿದರ ಕೃತಿಗಳು ಇಲ್ಲಿ ಜೀವಂತವಾಗಿವೆ. ನೈಸರ್ಗಿಕವಾಗಿ ಇಲ್ಲಿನ ಸೈಪ್ರಸ್ ಮರಗಳು, ದ್ರಾಕ್ಷಿ ತೋಟಗಳು ಮತ್ತು ಹಸಿರನ್ನು ಹೊದ್ದುಕೊಂಡಿರುವ ಬೆಟ್ಟ-ಗುಡ್ಡದ ಸುಂದರ ಭೂದೃಶ್ಯಗಳು ಟಸ್ಕನಿಯ ನೈಜ ಸೌಂದರ್ಯವನ್ನು ಅನಾವರಣಗೊಳಿಸುತ್ತವೆ. ಇತಿಹಾಸ, ಕಲೆ ಮತ್ತು ಪ್ರಕೃತಿ ಪ್ರಿಯರಾಗಿದ್ದರೆ, ಟಸ್ಕನಿಯು ಅತ್ಯುತ್ತಮ ತಾಣವಾಗಿದೆ.
ಡೊಲೊಮೈಟ್ಸ್
ಡೊಲೊಮೈಟ್ಸ್ ಪರ್ವತ ಸೌಂದರ್ಯಕ್ಕಾಗಿ ಪ್ರಸಿದ್ಧವಾದ ಉತ್ತರ ಇಟಲಿಯ ಅತ್ಯಂತ ಮನಮೋಹಕ ಪ್ರದೇಶಗಳಲ್ಲಿ ಒಂದು. ಗುಲಾಬಿ ಛಾಯೆಯ ಶಿಖರಗಳು, ಮೈದಾನಗಳಂತಿರುವ ಪರ್ವತಗಳು ಈ ಪ್ರದೇಶಕ್ಕೆ ವಿಶಿಷ್ಟ ಆಕರ್ಷಣೆಯನ್ನು ನೀಡುತ್ತವೆ. ಟ್ರೆಕ್ಕಿಂಗ್, ಸ್ಕೀಯಿಂಗ್ ಮತ್ತು ಸಾಹಸ ಕ್ರೀಡೆಗಳಿಗಾಗಿ ಇದು ಅತ್ಯುತ್ತಮ ತಾಣ.
ಅಮಾಲ್ಫಿ ಕರಾವಳಿ
ಇಟಲಿಯ ಅತ್ಯಂತ ಪ್ರಸಿದ್ಧ ಕರಾವಳಿಗಳಲ್ಲಿ ಒಂದಾದ ಅಮಾಲ್ಫಿ ಕರಾವಳಿ ಪ್ರಕೃತಿಯ ಸುಂದರ ದೃಶ್ಯವಾಗಿದೆ. ಸಮುದ್ರ ತೀರದಲ್ಲಿರುವ ಸುಂದರ ಪರ್ವತಗಳು, ಹಳ್ಳಿಗಳು ಈ ಪ್ರದೇಶಕ್ಕೆ ವಿಶಿಷ್ಟ ಸೌಂದರ್ಯ ನೀಡುತ್ತವೆ. ಪ್ರೇಮಿಗಳಿಗಂತೂ ಬಹಳ ಇಷ್ಟವಾದ ಪ್ರವಾಸಿ ತಾಣವಾಗಿದೆ.

ಪೊಂಪೈ
ಕ್ರಿ.ಶ. 79ರಲ್ಲಿ ಜ್ವಾಲಾಮುಖಿ ಸ್ಫೋಟದಿಂದ ಪೊಂಪೈನ ಅವಶೇಷಗಳು ಇತಿಹಾಸ ಪ್ರಿಯರಿಗೆ ಅಚ್ಚರಿ ಮೂಡಿಸುವ ತಾಣ. ರೋಮನ್ ಬೀದಿಗಳು, ಭವ್ಯ ಮನೆಗಳು ಮತ್ತು ಸಾರ್ವಜನಿಕ ಸ್ನಾನಗೃಹಗಳು 2000 ವರ್ಷಗಳ ಹಿಂದಿನ ಜೀವನವನ್ನು ಕಣ್ಣೆದುರು ತರುತ್ತವೆ.
ಎಮಿಲಿಯಾ-ರೊಮಾಗ್ನಾ
ಆಹಾರ ಪ್ರಿಯರ ಸ್ವರ್ಗವೆಂದೇ ಖ್ಯಾತಿ ಪಡೆದಿರುವ ಎಮಿಲಿಯಾ-ರೊಮಾಗ್ನಾ ರುಚಿಕರ ಭಕ್ಷ್ಯಗಳಿಗಾಗಿ ವಿಶ್ವವಿಖ್ಯಾತಿ ಪಡೆದಿವೆ. ಮೊರ್ಟಡೆಲ್ಲಾ, ಟೋರ್ಟೆಲ್ಲಿನಿ ಮತ್ತು ಟ್ಯಾಗ್ಲಿಯಾಟೆಲ್ಲೆ ಅಲ್ ರಾಗೊ, ಸ್ಪಾಗೆಟ್ಟಿ ಬೊಲೊಗ್ನೀಸ್‌ನಂತಹ ಇಟಾಲಿಯನ್ ಪದಾರ್ಥಗಳು ಇಲ್ಲಿಂದಲೇ ಜನ್ಮ ಪಡೆದಿವೆ. ಇಟಲಿಯ ನೈಜ ರುಚಿಯನ್ನು ಅನುಭವಿಸಬೇಕೆಂದವರಿಗೆ ಇದು ತಪ್ಪದೇ ಭೇಟಿ ನೀಡಬೇಕಾದ ತಾಣ.

ಲಾಗೊ ಡಿ ಕೊಮೊ
ಲಾಗೊ ಡಿ ಕೊಮೊ ಇಟಲಿಯ ಅತ್ಯಂತ ಆಕರ್ಷಕ ಸರೋವರಗಳಲ್ಲಿ ಒಂದು. ಆಲ್ಪ್ಸ್ ಪರ್ವತಗಳ ಕೆಳಗೆ ನೆಲೆಸಿರುವ ಈ ಪ್ರದೇಶವು ಶತಮಾನಗಳಿಂದಲೇ ಶ್ರೀಮಂತರು ಮತ್ತು ಖ್ಯಾತನಾಮರ ನೆಚ್ಚಿನ ವಿಶ್ರಾಂತಿ ಸ್ಥಳವಾಗಿದೆ.
ಇನ್ನುಳಿದ ಪ್ರದೇಶಗಳ ಬಗ್ಗೆ ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಸಾರ್ಡಿನಿಯಾದ ಸುಂದರ ಕಡಲತೀರಗಳು, ನೇಪಲ್ಸ್‌ನ ನೈಜ ಇಟಾಲಿಯನ್ ಸಂಸ್ಕೃತಿ ಹಾಗೂ ಸುಂದರ ಭೂದೃಶ್ಯವನ್ನು ಹೊಂದಿರುವ ವೆನಿಸ್ ವಿಶೇಷ ಅನುಭವವನ್ನು ನೀಡುತ್ತವೆ. ಸಾಹಸ ಪ್ರಿಯರಿಗೆ ಮೌಂಟ್ ಎಟ್ನಾ ಮತ್ತು ಟ್ರೆಕ್ಕಿಂಗ್‌ಗೆ ಪಾರ್ಕೊ ನಾಜಿಯೋನೇಲ್ ಡೆಲ್ ಗ್ರ್ಯಾನ್ ಪ್ಯಾರಾಡಿಸೊ ಅತ್ಯುತ್ತಮ ತಾಣಗಳು. ಸಿಂಕ್ ಟೆರ್ರೆ ಮತ್ತು ಲಿಗುರಿಯನ್ ಕರಾವಳಿ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಕಾಲ್ಪನಿಕ ಕಥೆಯಂತಿರುವ ಮನೆಗಳಿಗೆ ವ್ಯಾಲೆ ಡಿ’ಇಟ್ರಿಯಾ ಪ್ರಸಿದ್ಧವಾದರೆ, ಆಧುನಿಕತೆ ಮತ್ತು ಫ್ಯಾಷನ್‌ಗಾಗಿ ಮಿಲನ್ ಇಟಲಿಯ ಮತ್ತೊಂದು ಮುಖವನ್ನು ಪರಿಚಯಿಸುತ್ತದೆ.
