ಬೆಂಗಳೂರು: ದೇಶ ಮಾತ್ರವಲ್ಲ ಪ್ರಪಂಚದ ವಿವಿಧ ಕಡೆಗಳ ಪ್ರವಾಸಿಗರನ್ನು ದಕ್ಷಿಣ ಭಾರತದ ನೈಸರ್ಗಿಕ, ಅದ್ಭುತ ರಮಣೀಯ ತಾಣಗಳು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಇದೇ ಕಾರಣಕ್ಕೆ ಪ್ರತಿವರ್ಷ ಇಲ್ಲಿಗೆ ಭೇಟಿ ನೀಡುವ ವಿದೇಶಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಂಸ್ಕೃತಿಯ ಹೃದಯ ಎಂದೇ ದಕ್ಷಿಣ ಭಾರತವನ್ನು ಕರೆಯಲಾಗುತ್ತದೆ. ಪುರಾತನ ದೇವಾಲಯಗಳು, ಗಮನ ಸೆಳೆಯುವ ನದಿ, ಸರೋವರಗಳು, ಅರಣ್ಯ, ನದಿ ದಂಡೆ ಮತ್ತು ಅದ್ಭುತ ಸಮುದ್ರ ಕಿನಾರೆ ಇಲ್ಲಿನ ವೈಶಿಷ್ಟ್ಯ. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಪುದುಚೇರಿಯನ್ನೊಳಗೊಂಡ ಈ ಪ್ರದೇಶ ಅನನ್ಯ ಅನುಭೂತಿ ನೀಡುತ್ತದೆ. ಒಂದು ವೇಳೆ ನೀವು 2026ರಲ್ಲಿ ದಕ್ಷಿಣ ಭಾರತ ಪ್ರವಾಸ ಮಾಡಬೇಕೆಂದು ಯೋಜನೆ ರೂಪಿಸುತ್ತಿದ್ದರೆ ಇಲ್ಲಿದೆ ಭೇಟಿ ನೀಡಲೇಬೇಕಾದ 10 ತಾಣಗಳ ಬಗ್ಗೆ ಮಾಹಿತಿ.
ಹಂಪಿ-ಕರ್ನಾಟಕ

ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಹಂಪಿ ಕರ್ನಾಟಕದ ವಿಜಯನಗರ ಜಿಲ್ಲೆಯಲ್ಲಿದೆ. ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿ ಕರ್ನಾಟದ ಭವ್ಯ ಇತಿಹಾಸದ ಖಜಾನೆ. ಶ್ರೀಮಂತ ಶಿಲ್ಪ ಕಲೆಯ ತವರೂರಾಗಿರುವ ಹಂಪಿಗೆ ಒಮ್ಮೆಯಾದರೂ ಭೇಟಿ ನೀಡಲೇಬೇಕು.
ಪ್ರಮುಖ ಆಕರ್ಷಣೆ:
- ವಿರೂಪಾಕ್ಷ ದೇವಾಲಯ: ಇದು ಹಂಪಿಯ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದು.
- ವಿಠಲ ದೇವಾಲಯ: ಕಲ್ಲಿನ ರಥ ಮತ್ತು ಸಂಗೀತ ಸ್ತಂಭಗಳಿಗೆ ಹೆಸರುವಾಸಿಯಾದ ಇದು ವಾಸ್ತುಶಿಲ್ಪದ ಅದ್ಭುತ.
- ಗಮನಿಸಿ: ಹಂಪಿಗೆ ಭೇಟಿ ನೀಡುವುದಾದರೆ 2-3 ದಿನಗಳ ಪ್ರಯಾಣದ ಪ್ಲ್ಯಾನ್ ಮಾಡಿ. ಸ್ಥಳೀಯ ಗೈಡ್ ನೇಮಿಸಿ.
ರಾಮೇಶ್ವರಂ-ತಮಿಳುನಾಡು

ತಮಿಳುನಾಡಿನ ರಾಮೇಶ್ವರಂ ಆಧ್ಯಾತ್ಮಿಕ, ಚಾರಿತ್ರಿಕ ಮತ್ತು ಕರಾವಳಿ ಸೌಂದರ್ಯವನ್ನು ಒಳಗೊಂಡಿರುವ ಸುಂದರ ತಾಣ. ರಾಮನಾಥಪುರಂ ಜಿಲ್ಲೆಯಲ್ಲಿ ಪಂಬನ್ ದ್ವಿಪದಲ್ಲಿರುವ ಈ ನಗರ ದೇಶದ ಪವಿತ್ರ ಸ್ಥಳಗಳಲ್ಲಿ ಒಂದು ಎನಿಸಿಕೊಂಡಿದೆ. ಹಿಂದೂ ಪುರಾಣದ ಪ್ರಕಾರ ಶ್ರೀರಾಮ ಇಲ್ಲಿಂದ ಶ್ರೀಲಂಕಾಕ್ಕೆ ರಾಮಸೇತು ನಿರ್ಮಿಸಿದ ಎನ್ನುವ ನಂಬಿಕೆ ಇದೆ.
ಪ್ರಮುಖ ಆಕರ್ಷಣೆ
ರಾಮನಾಥಸ್ವಾಮಿ ದೇಗುಲ: ಏಷ್ಯಾದಲ್ಲೇ ಅತಿ ಉದ್ದದ, ಭವ್ಯವಾದ ಕಾರಿಡಾರ್‌ಗಳು ಮತ್ತು 1,200 ಕೆತ್ತಿದ ಕಂಬಗಳಿಗೆ ಈ ದೇಗುಲ ಹೆಸರುವಾಸಿ. ಯಾತ್ರಿಕರು ಗರ್ಭಗುಡಿಗೆ ಪ್ರವೇಶಿಸುವ ಮೊದಲು ದೇವಾಲಯದ 22 ನೀರಿನ ಬಾವಿಗಳಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ.
ಧನುಷ್ಕೋಡಿ: ಅದ್ಭುತ ಸಮುದ್ರ ನೋಟವನ್ನು ನೀಡುವ ಈ ನಗರ 1964ರಲ್ಲಿ ಅಪ್ಪಳಿಸಿದ ಚಂಡಮಾರುತದ ಹೊಡೆತಕ್ಕೆ ಸಿಲುಕಿ ನಾಶವಾಗಿದೆ. ಅದಾಗ್ಯೂ ಇಲ್ಲಿನ ಬೀಚ್ ಎಂತಹವರನ್ನೂ ಆಕರ್ಷಿಸುತ್ತದೆ.
ಪಂಬನ್ ಸೇತುವೆ: ಭಾರತದ ಮೊದಲ ಸಮುದ್ರ ಸೇತುವೆ ಇದು. ಎಂಜಿನಿಯರ್‌ನ ಅದ್ಭುತ ಎಂದೇ ಇದನ್ನು ಕರೆಯಲಾಗುತ್ತದೆ. ರೈಲು ಸಂಚರಿಸುವಾಗ ಸೇತುವೆಯಾಗುವ ಇದು, ಹಡಗು ಸಂಚರಿಸುವಾಗ ಲಂಬವಾಗಿ ಮೇಲಕ್ಕೇರಿ ದಾರಿ ಮಾಡಿಕೊಡುತ್ತದೆ. ಇದನ್ನು ನೋಡುವುದೇ ಅದ್ಭುತ ಅನುಭೂತಿ.
ಗಮನಿಸಿ
ರಾಮೇಶ್ವರಂನಲ್ಲಿ ಸಾವಧಾನವಾಗಿ ಸಮಯ ಕಳೆಯಬೇಕು. ಕಡಲತೀರದಲ್ಲಿ ನಿಂತು ಸೂರ್ಯಾಸ್ತ ವೀಕ್ಷಿಸುವುದು ಸ್ಮರಣೀಯ ಅನುಭವವಾಗಲಿದೆ. ಸಮುದ್ರದಿಂದ ಮೀನುಗಾರರು ಮೀನು ಹಿಡಿದು ತರವುದನ್ನು ಕೂಡ ನೋಡಬಹುದು. ಜತೆಗೆ ಸ್ಥಳೀಯ ಸಮುದ್ರಾಹಾರ ಸವಿಯುವುದನ್ನು ಮರೆಯಬೇಡಿ. ಡಿಸೆಂಬರ್ ಭೇಟಿ ನೀಡಲು ಸೂಕ್ತ ಸಮಯ.
ಊಟಿ-ತಮಿಳುನಾಡು

ನೀಲಗಿರಿಯ ರಾಣಿ ಎಂದೇ ಕರೆಯಲ್ಪಡುವ ಊಟಿ ಭಾರತದ ಅತ್ಯಂತ ಜನಪ್ರಿಯ ಗಿರಿಧಾಮ. ಎತ್ತ ನೋಡಿದರೂ ಕಾಣುವ ಹಸಿರು ನೋಟ, ಮೈಗೆ ಮುತ್ತಿಕ್ಕಿ ಸಾಗುವ ಮೋಡ ಹೊಸದೊಂದು ಪ್ರಪಂಚಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ.
ಪ್ರಮುಖ ಆಕರ್ಷಣೆ
- ನೀಲಗಿರಿ ಪರ್ವತದ ರೈಲು: ಅಂಕುಡೊಂಕಾದ ಹಳಿಗಳು, ಸುರಂಗಗಳು ಮತ್ತು ಹಚ್ಚ ಹಸಿರಿನ ಕಣಿವೆಗಳ ಮೂಲಕ ನಿಮ್ಮನ್ನು ಕರೆದೊಯ್ಯುವ ಯುನೆಸ್ಕೋ ವಿಶ್ವ ಪರಂಪರೆಯ ರೈಲು ಸವಾರಿ ಮಿಸ್ ಮಾಡ್ಲೇಬೇಡಿ.
- ಸಸ್ಯೋದ್ಯಾನ: 55 ಎಕರೆಗಳಲ್ಲಿ ಹರಡಿರುವ ಈ ಉದ್ಯಾನವು ವಿಶಿಷ್ಟ ಸಸ್ಯಗಳು, ಅಪರೂಪದ ಮರಗಳು ಮತ್ತು 20 ಮಿಲಿಯನ್ ವರ್ಷಗಳಿಗಿಂತ ಹಳೆಯದಾದ ಪಳೆಯುಳಿಕೆಯನ್ನು ಹೊಂದಿದೆ.
- ಚಹಾ ತೋಟ: ಊಟಿಯ ಚಹಾ ವಿಶ್ವಪ್ರಸಿದ್ಧ. ಚಹಾ ತೋಟ ಮತ್ತು ಚಹಾ ಪುಡಿ ಕಾರ್ಖಾನೆಗೆ ಭೇಟಿ ನೀಡುವುದರಿಂದ ಚಹಾವನ್ನು ಹೇಗೆ ಬೆಳೆಯಲಾಗುತ್ತದೆ ಮತ್ತು ಸಂಸ್ಕರಿಸಲಾಗುತ್ತದೆ ಎನ್ನುವುದನ್ನು ಗಮನಿಸಬಹುದು.
ಗಮನಿಸಿ
ಡಿಸೆಂಬರ್‌ನಲ್ಲಿ ಊಟಿಯಲ್ಲಿ ಚಳಿ ಮತ್ತು ಮಂಜು ಇರುತ್ತದೆ. ಬೆಚ್ಚಗಿನ ಬಟ್ಟೆಗಳನ್ನು ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ.
ಕುಂಭಕೋಣಂ-ತಮಿಳುನಾಡು

ಕುಂಭಕೋಣಂ ತಮಿಳುನಾಡಿನ ದೇವಾಲಯ ಪಟ್ಟಣ. ಕಾವೇರಿ ಮತ್ತು ಅರಸಲಾರ್ ನದಿಗಳ ನಡುವಿನ ಈ ಪ್ರದೇಶದಲ್ಲಿ ಡಜನ್‌ಗಟ್ಟಲೆ ದೇವಾಲಯಗಳಿವೆ. ಪ್ರತಿಯೊಂದು ದೇಗುಲವು ದ್ರಾವಿಡ ವಾಸ್ತುಶಿಲ್ಪದ ಭವ್ಯತೆಗೆ ಸಾಕ್ಷಿಯಾಗಿ ತಲೆ ಎತ್ತಿ ನಿಂತಿದೆ.
ಪ್ರಮುಖ ಆಕರ್ಷಣೆ
- ಆದಿ ಕುಂಭೇಶ್ವರ ದೇವಾಲಯ: ಶಿವನಿಗೆ ಸಮರ್ಪಿತವಾದ ಈ ದೇವಾಲಯ ಅತ್ಯಂತ ಜನಪ್ರಿಯ.
- ಐರಾವತೇಶ್ವರ ದೇವಾಲಯ (ದಾರಾಸುರಾಮ್): ಚೋಳ ರಾಜವಂಶವು ನಿರ್ಮಿಸಿದ ಯುನೆಸ್ಕೋ ವಿಶ್ವ ಪರಂಪರೆಯ ತಾಣ. ಇದು ಸೊಗಸಾದ ಕೆತ್ತನೆಗಳಿಗೆ ಹೆಸರುವಾಸಿ.
- ಮಹಾಮಹಂ ಕೆರೆ: ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಉತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸುತ್ತಾರೆ.
ಗಮನಿಸಿ
ಸಂಪೂರ್ಣ ದೇವಾಲಯವನ್ನು ವೀಕ್ಷಿಸಲು ತಂಜಾವೂರು ಮತ್ತು ಮೈಲಾಡುತುರೈನಂತಹ ಪಟ್ಟಣಗಳಿಗೆ ಭೇಟಿ ನೀಡಿ.
ಮಧುರೈ-ತಮಿಳುನಾಡು

ಭಾರತದ ಅತ್ಯಂತ ಪ್ರಾಚೀನ ನಗರಗಳಲ್ಲಿ ಮಧುರೈ ಕೂಡ ಒಂದು. ಇದಕ್ಕೆ 2,500 ವರ್ಷಗಳ ಇತಿಹಾಸವಿದೆ. ಮಧುರೈಯನ್ನು ತಮಿಳುನಾಡಿನ ಸಾಂಸ್ಕೃತಿಕ ರಾಜಧಾನಿ ಎಂದು ಗುರುತಿಸಲಾಗುತ್ತದೆ.
ಪ್ರಮುಖ ಆಕರ್ಷಣೆ
- ಮೀನಾಕ್ಷಿ ಅಮ್ಮನ ದೇಗುಲ: ಇಲ್ಲಿ ಆಕರ್ಷಕ ಕೆತ್ತನೆಯನ್ನೊಳಗೊಂಡ 14 ಗೋಪುರಗಳಿವೆ. ದ್ರಾವಿಡಿಯನ್ ಶಿಲ್ಪಕಲೆಗೆ ಉತ್ತಮ ಉದಾಹರಣೆಯಂತಿರುವ ಈ ದೇಗುಲದಲ್ಲಿನ ಸಂಜೆಯ ಆರತಿ ಬಹು ಜನಪ್ರಿಯ.
- ತಿರುಮಲೈ ನಾಯಕ್ಕರ್ ಮಹಲ್: 17ನೇ ಶತಮಾನದಲ್ಲಿ ನಿರ್ಮಾಣವಾದ ಈ ಅರಮನೆ ಅದ್ಭುತ ಹಾಲ್, ಕಮಾನುಗಳನ್ನು ಒಳಗೊಂಡಿದೆ.
- ಸ್ಥಳೀಯ ಆಹಾರ: ಮಧುರೈಯ ಸ್ಥಳೀಯ ಆಹಾರಗಳನ್ನು ನೀವು ಸೇವಿಸಲೇಬೇಕು. ಇಲ್ಲಿನ ಇಡ್ಲಿ, ಕರಿ ದೋಸೆ ಮತ್ತು ಜಿಗರ್‌ಥಂಡಾ ನಿಮ್ಮ ಪ್ರವಾಸವನ್ನು ಇನ್ನಷ್ಟು ರಂಗಾಗಿಸಲಿದೆ.
ಗಮನಿಸಿ
ಕಾಲ್ನಡಿಗೆ ಮೂಲಕ ಮಧುರೈಯಲ್ಲಿ ಸುತ್ತಾಡಿ. ಅಲ್ಲಿನ ಹಳೆಯ ಬೀದಿ, ಹೂ ಮಾರುಕಟ್ಟೆ ಮತ್ತು ದೇಗುಲದ ಆವರಣ ಹೊಸದೊಂದು ಅನುಭವ ನೀಡಲಿದೆ.
ಮಹಾಬಲಿಪುರಂ-ತಮಿಳುನಾಡು

ಮಹಾಬಲಿಪುರಂ ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಣವಾಗಿದ್ದು, ಶಿಲಾ ದೇವಾಲಯಗಳು ಮತ್ತು ಸ್ಮಾರಕಗಳಿಗೆ ಜನಪ್ರಿಯ. ಪಲ್ಲವ ರಾಜವಂಶದ ಅವಧಿಯಲ್ಲಿ ನಿರ್ಮಿಸಲಾದ ಈ ನಗರವು ದಕ್ಷಿಣ ಭಾರತದ ಕಲಾತ್ಮಕ ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತದೆ.
ಪ್ರಮುಖ ಆಕರ್ಷಣೆ
- 5 ರಥಗಳು: ಏಕಶಿಲೆಯ ದೇವಾಲಯದ 5 ರಥಗಳನನು ಕಣ್ತುಂಬಿಕೊಳ್ಳಿ.
- ಅರ್ಜುನನ ತಪಸ್ಸು: ಮಹಾಭಾರತದ ದೃಶ್ಯಗಳನ್ನು ಚಿತ್ರಿಸುವ ಬೃಹತ್ ಶಿಲಾ ಕೆತ್ತನೆ.
- ಗಮನಿಸಿ
- ಮಹಾಬಲಿಪುರಂ ಹಲವಾರು ಬೀಚ್ ರೆಸಾರ್ಟ್‌ಗಳು ಮತ್ತು ಕೆಫೆಗಳನ್ನು ಹೊಂದಿದ್ದು, ಭೇಟಿ ನೀಡಲು ಡಿಸೆಂಬರ್ ಸೂಕ್ತ ಸಮಯ.
ಪುದುಚೇರಿ

ಫ್ರೆಂಚ್ ವಸಾಹತು ಪ್ರದೇಶವಾಗಿದ್ದ ಪುದುಚೇರಿ, ಫ್ರೆಂಚ್ ಮತ್ತು ತಮಿಳು ಸಂಸ್ಕೃತಿಗಳ ವಿಶಿಷ್ಟ ಸಮ್ಮಿಳನಕ್ಕೆ ಇಂದಿಗೂ ಸಾಕ್ಷಿಯಾಗಿ ನಿಂತಿದೆ.
ಪ್ರಮುಖ ಆಕರ್ಷಣೆ
- ಫ್ರೆಂಚ್ ಕ್ವಾರ್ಟರ್: ಹಳದಿ ಮತ್ತು ಪಿಂಕ್ ಬಣ್ಣಗಳಲ್ಲಿ ಚಿತ್ರಿಸಿದ ವಸಾಹತುಶಾಹಿ ಮನೆಗಳೊಂದಿಗೆ ಕಲ್ಲುಮಣ್ಣಿನ ಬೀದಿಗಳಲ್ಲಿ ಅಡ್ಡಾಡಿ.
- ಆರೋವಿಲ್ಲೆ: ಶಾಂತಿ ಮತ್ತು ಸುಸ್ಥಿರ ಜೀವನಕ್ಕೆ ಮೀಸಲಾಗಿರುವ ಆಧ್ಯಾತ್ಮಿಕ ಪಟ್ಟಣ. ಮಾತೃಮಂದಿರದ ಚಿನ್ನದ ಗುಮ್ಮಟವು ಕೇಂದ್ರಬಿಂದು.
- ಕಡಲ ತೀರಗಳು: ರಾಕ್ ಬೀಚ್, ಸೆರೆನಿಟಿ ಬೀಚ್ ಮತ್ತು ಪ್ಯಾರಡೈಸ್ ಬೀಚ್ ಮನಸ್ಸಿಗೆ ನೆಮ್ಮದಿ ನೀಡಲಿದೆ.
ಗಮನಿಸಿ
ಪುದುಚೇರಿ ಕೆಫೆ ಪ್ರಿಯರ ಸ್ವರ್ಗ. ಫ್ರೆಂಚ್ ಪೇಸ್ಟ್ರಿಗಳು, ಇಟಾಲಿಯನ್ ಕಾಫಿ ಮತ್ತು ತಮಿಳುನಾಡಿನ ಸಾಂಪ್ರದಾಯಿಕ ತಿನಿಸು ಟ್ರೈ ಮಾಡಿ.
ತಿರುಪತಿ-ಆಂಧ್ರ ಪ್ರದೇಶ

ತಿರುಪತಿ ಭಾರತದ ಅತ್ಯಂತ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದು. ತಿರುಮಲ ಬೆಟ್ಟಗಳಲ್ಲಿರುವ ಶ್ರೀ ವೆಂಕಟೇಶ್ವರ ದೇವಾಲಯವು ವಿಶ್ವದ ಅತ್ಯಂತ ಶ್ರೀಮಂತ ಮತ್ತು ಹೆಚ್ಚು ಭಕ್ತರು ಭೇಟಿ ನೀಡುವ ದೇವಸ್ಥಾನಗಳಲ್ಲಿ ಒಂದು.
ಪ್ರಮುಖ ಆಕರ್ಷಣೆ
ನೈಸರ್ಗಿಕ ಸೌಂದರ್ಯ: ತಿರುಪತಿ ದೇವಾಲಯವು ಹಚ್ಚ ಹಸಿರಿನ ಬೆಟ್ಟಗಳು, ಜಲಪಾತಗಳು ಮತ್ತು ಪ್ರಶಾಂತ ಭೂ ಪ್ರದೇಶದಿಂದ ಆವೃತವಾಗಿದೆ.
ಗಮನಿಸಿ
ಹೆಚ್ಚಿನ ಜನಸಂದಣಿ ಇರುವ ರಜಾ ದಿನಗಳಗಳಲ್ಲಿ ಭೇಟಿ ನೀಡುವುದಾದರೆ ದರ್ಶನ ಟಿಕೆಟ್‌ಗಳನ್ನು ಮುಂಚಿತವಾಗಿ ಬುಕ್ ಮಾಡಿ.
ಕೇರಳದ ಹಿನ್ನೀರು

ಕೇರಳದ ಹಿನ್ನೀರು ಕಾಲುವೆಗಳು, ಲಗೂನ್‌ಗಳು ಮತ್ತು ಸರೋವರಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಇವು ಜಗತ್ತಿನಲ್ಲಿ ಬೇರೆಲ್ಲಿಯೂ ಕಂಡುಬರದ ವಿಶಿಷ್ಟ ನೋಟವನ್ನು ಒದಗಿಸುತ್ತವೆ.
ಪ್ರಮುಖ ಆಕರ್ಷಣೆ
ಅಲೆಪ್ಪಿ (ಆಲಪ್ಪುಳ): ಪೂರ್ವದ ವೆನಿಸ್ ಎಂದು ಕರೆಯಲ್ಪಡುವ ಇದು, ನೀವು ರಾತ್ರಿಯಿಡೀ ತಂಗಲು, ಕೇರಳದ ಊಟವನ್ನು ಆನಂದಿಸಲು ನೆರವಾಗುತ್ತದೆ. ಭತ್ತದ ಗದ್ದೆಗಳು ಮತ್ತು ಹಳ್ಳಿಗಳನ್ನು ನೋಡುತ್ತ ತೇಲಲು ಹೌಸ್‌ಬೋಟ್ಗಳ ವ್ಯವಸ್ಥೆ ಇಲ್ಲಿದೆ.
ಕುಮಾರಕೋಮ್: ಐಷಾರಾಮಿ ರೆಸಾರ್ಟ್‌ಗಳು ಮತ್ತು ಪಕ್ಷಿಧಾಮಕ್ಕೆ ನೆಲೆಯಾಗಿರುವ ಇದು ಪ್ರಕೃತಿ ಪ್ರಿಯರಿಗೆ ಸೂಕ್ತ ತಾಣ.
ಗಮನಿಸಿ
ಡಿಸೆಂಬರ್‌ನಲ್ಲಿ ನೀವು ಭೇಟಿ ನೀಡುವುದಾದರೆ ಹೌಸ್‌ಬೋಟ್ ಅನ್ನು ಮೊದಲೇ ಬುಕ್ ಮಾಡಿ. ಪರಿಸರ ಸ್ನೇಹಿ ಅನುಭವಕ್ಕಾಗಿ ದೊಡ್ಡ ದೋಣಿಗಳ ಬದಲಿಗೆ ಸಣ್ಣ, ಸೌರಶಕ್ತಿ ಚಾಲಿತ ದೋಣಿಗಳನ್ನು ಆರಿಸಿಕೊಳ್ಳಿ.
ಮುನ್ನಾರ್-ಕೇರಳ

ಮುನ್ನಾರ್ ಭಾರತದ ಅತ್ಯಂತ ಸುಂದರ ಗಿರಿಧಾಮಗಳಲ್ಲಿ ಒಂದು. ಚಹಾ ತೋಟ ಮತ್ತು ಮಂಜಿನಿಂದ ಕೂಡಿದ ಪರ್ವತಗಳಿಂದ ಸುತ್ತುವರಿದಿರುವ ಇದು ಸ್ವರ್ಗ ಸದೃಶ ಅನುಭವ ನೀಡುತ್ತದೆ.
ಭಾರತೀಯರು ಹೆಚ್ಚು ಹುಡುಕಿದ ಪ್ರವಾಸಿ ಸ್ಥಳಗಳು
ಪ್ರಮುಖ ಆಕರ್ಷಣೆ
- ಚಹಾ ತೋಟ: ಬೆಟ್ಟಗುಡ್ಡಗಳಲ್ಲಿ ಹರಡಿರುವ ಇವು ಫೋಟೊಗ್ರಫಿಗೆ ಹೇಳಿ ಮಾಡಿಸಿದಂತವು.
- ಎರವಿಕುಲಂ ರಾಷ್ಟ್ರೀಯ ಉದ್ಯಾನವನ: ಅಳಿವಿನಂಚಿನಲ್ಲಿರುವ ನೀಲಗಿರಿ ತಹರ್ ಮತ್ತು ಪ್ರತಿ 12 ವರ್ಷಗಳಿಗೊಮ್ಮೆ ಅರಳುವ ಪ್ರಸಿದ್ಧ ನೀಲಕುರಿಂಜಿ ಹೂವುಗಳಿಗೆ ನೆಲೆ ಇದು.
ಗಮನಿಸಿ
ಡಿಸೆಂಬರ್ ಭೇಟಿಗೆ ಸೂಕ್ತ. ಈ ಸಮಯದಲ್ಲಿ ತಂಪಾದ ವಾತಾವರಣ ಇರುವುದರಿಂದ ಬೆಚ್ಚಗಿನ ಬಟ್ಟೆಗಳನ್ನು ಪ್ಯಾಕ್ ಮಾಡಿ. ಮುಂಜಾನೆ ಮಂಜು ಕವಿದ ಕಣಿವೆಗಳನ್ನು ಆನಂದಿಸಲು ಮರೆಯದಿರಿ.
