ಬೆಂಗಳೂರು: ಪ್ರತಿ ವರ್ಷ, ಕೆಲಸ, ಶಿಕ್ಷಣ ಅಥವಾ ಪ್ರವಾಸ ಕೈಗೊಳ್ಳಲು ಲಕ್ಷಾಂತರ ಭಾರತೀಯರು ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುತ್ತಾರೆ. 2025ರ ಜನವರಿ-ನವೆಂಬರ್ ಅವಧಿಯಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳ ಮೂಲಕ ಸುಮಾರು 29 ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
2025ರಲ್ಲಿ ಭಾರತೀಯ ಪಾಸ್‌ಪೋರ್ಟ್ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗಿದ್ದು, ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಅಥವಾ ಇರುವ ಪಾಸ್‌ಪೋರ್ಟ್ ನವೀಕರಣಗೊಳಿಸಲು, ಈ ನಿಯಮಗಳನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಡಿಜಿಟಲೀಕರಣ, ಭದ್ರತೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವುದರ ಜೊತೆಗೆ ಎಲ್ಲರಿಗೂ ಅರ್ಜಿ ಪ್ರಕ್ರಿಯೆಯನ್ನು ಸರಳಗೊಳಿಸುವುದೇ ಈ ಹೊಸ ನಿಯಮಗಳ ಉದ್ದೇಶವಾಗಿದೆ.

ಭಾರತೀಯ ಪಾಸ್‌ಪೋರ್ಟ್ ನಿಯಮಗಳಲ್ಲಾದ ಬದಲಾವಣೆಗಳೇನು?
ಪ್ರತಿ ವರ್ಷ ಲಕ್ಷಾಂತರ ಭಾರತೀಯರು ಕೆಲಸ, ಶಿಕ್ಷಣ ಅಥವಾ ಪ್ರಯಾಣಕ್ಕಾಗಿ ಜಾಗತಿಕ ಅವಕಾಶಗಳಿಗಾಗಿ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸುತ್ತಾರೆ. ಈ ವರ್ಷ ಪಾಸ್‌ಪೋರ್ಟ್ ನಿಯಮಗಳಲ್ಲಿ ಕೆಲ ಬದಲಾವಣೆಯಾಗಿದ್ದು, ಫೆಬ್ರವರಿ 2025ರಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA)ವು ಪಾಸ್‌ಪೋರ್ಟ್ ಕಾಯ್ದೆ, 1967ರ ಸೆಕ್ಷನ್ 24 ಅಡಿಯಲ್ಲಿ ಪಾಸ್‌ಪೋರ್ಟ್ ನಿಯಮಗಳು, 1980ಕ್ಕೆ ತಿದ್ದುಪಡಿಗಳನ್ನು ಮಾಡಿ ಅಧಿಕೃತವಾಗಿ ಪ್ರಕಟಿಸಿದೆ. ಈ ಬದಲಾವಣೆಗಳು ಮೊದಲ ಬಾರಿಗೆ ಅರ್ಜಿ ಸಲ್ಲಿಸುವವರಿಗೆ ಹಾಗೂ ನವೀಕರಣಗೊಳಿಸುವವರಿಗೂ ಅನ್ವಯವಾಗುತ್ತವೆ.
ಜನನ ಪ್ರಮಾಣಪತ್ರ ಕಡ್ಡಾಯ
ಹೊಸ ನಿಯಮಗಳ ಪ್ರಕಾರ, 2023ರ ಅ.1ರ ನಂತರ ಜನಿಸಿದವರು ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವಾಗ ಜನನ ಪ್ರಮಾಣಪತ್ರವನ್ನು ಮಾತ್ರ ಜನ್ಮ ದಿನಾಂಕದ ಪುರಾವೆಯಾಗಿ ಸಲ್ಲಿಸಬೇಕು. ಈ ಪ್ರಮಾಣಪತ್ರವನ್ನು ಜನನ-ಮರಣ ನೋಂದಣಾಧಿಕಾರಿ, ಪಾಲಿಕೆ ಅಧಿಕಾರಿಗಳೇ ನೀಡಿರಬೇಕು. ಗ್ರಾಮೀಣ ಭಾಗದಲ್ಲಿ ಜನನ ಪ್ರಮಾಣಪತ್ರಗಳ ಕೊರತೆಯಿಂದಾಗಿ, ಅನೇಕ ವರ್ಷಗಳಿಂದ ಜನ್ಮ ದಿನಾಂಕಕ್ಕೆ ಸಂಬಂಧಿಸಿದ ಪಾಸ್‌ಪೋರ್ಟ್ ನಿಯಮಗಳು ಬದಲಾವಣೆ ಆಗಿರಲಿಲ್ಲ. ಆದರೆ, ಈಗ ಕಾನೂನು ಅನುಷ್ಠಾನ ಕಠಿಣವಾಗುತ್ತಿರುವ ಹಿನ್ನೆಲೆ ಜನನ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದಾಗಿ ನಕಲಿ ದಾಖಲೆಗಳ ಅಪಾಯ ಕಡಿಮೆಯಾಗಲಿವೆ.
2023ರ ಅಕ್ಟೋಬರ್ 1ರ ಮೊದಲು ಜನಿಸಿದವರು ಸ್ಕೂಲ್ ಲೀವಿಂಗ್ ಸರ್ಟಿಫಿಕೆಟ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ ಅಥವಾ ಪ್ರಮಾಣೀಕೃತ ಸೇವಾ ದಾಖಲೆಗಳಂತಹ ಪರ್ಯಾಯ ದಾಖಲೆಗಳನ್ನು ಹೊಸ ಪಾಸ್‌ಪೋರ್ಟ್ ಅಥವಾ ನವೀಕರಣಕ್ಕೆ ಸಲ್ಲಿಸಬಹುದಾಗಿದೆ.

ಪಾಸ್‌ಪೋರ್ಟ್‌ನಲ್ಲಿ ಇನ್ನು ವಿಳಾಸ ಇರಲ್ಲ
ಪಾಸ್‌ಪೋರ್ಟ್ ನಿಯಮಗಳಲ್ಲಿನ ಮತ್ತೊಂದು ಪ್ರಮುಖ ಬದಲಾವಣೆ ಎಂದರೆ ಪಾಸ್‌ಪೋರ್ಟ್‌ನಲ್ಲಿ ಇನ್ನು ವಾಸಸ್ಥಳದ ವಿಳಾಸ ಇರುವುದಿಲ್ಲ. ಪಾಸ್‌ಪೋರ್ಟ್‌ನ ಕೊನೆಯ ಪುಟದಲ್ಲಿ ಮನೆ ವಿಳಾಸ ತೋರಿಸುವ ಬದಲಾಗಿ, ಡಿಜಿಟಲ್ ರೂಪದಲ್ಲಿ ನಿಮ್ಮ ವಿವರಗಳನ್ನು ಎಂಬೆಡ್ ಮಾಡಲಾದ ಬಾರ್‌ಕೋಡ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಅಗತ್ಯವಿದ್ದಾಗ ಇಮಿಗ್ರೆಷನ್ ಅಧಿಕಾರಿಗಳು ಅದನ್ನು ಸ್ಕ್ಯಾನ್ ಮಾಡಬಹುದು. ಈ ನಿಯಮವು ಐಡೆಂಟಿಟಿ ಕಳವು, ವಂಚನೆ ಮತ್ತು ಗೌಪ್ಯತೆ ಸಂಬಂಧಿತ ಅಪಾಯಗಳನ್ನು ತಡೆಯಲು ಸಹಾಯಕವಾಗಿದೆ.
ಪೋಷಕರ ಹೆಸರೂ ಇರಲ್ಲ
ಹೊಸ ನಿಯಮಗಳ ಪ್ರಕಾರ ಪಾಸ್‌ಪೋರ್ಟ್‌ನಲ್ಲಿ ಪೋಷಕರ ಹೆಸರು ಸೇರಿಸುವುದನ್ನು ಕೈಬಿಡಲಾಗಿದೆ. ಇದರಿಂದ ಅರ್ಜಿದಾರರಿಗೆ ಹೆಚ್ಚಿನ ಗೌಪ್ಯತೆ ಮತ್ತು ಸ್ವಾತಂತ್ರ್ಯ ದೊರೆಯುತ್ತದೆ. ಒಬ್ಬ ಪೋಷಕರೊಂದಿಗೆ ಬೆಳೆದವರು, ಸಂಕೀರ್ಣ ಕುಟುಂಬ ಹಿನ್ನೆಲೆ ಹೊಂದಿರುವವರು, ಅಂತರಧರ್ಮೀಯ ಕುಟುಂಬದಿಂದ ಬಂದವರು ಅಥವಾ ವಿದೇಶ ಪ್ರಯಾಣದ ವೇಳೆ ಗೌಪ್ಯತೆಯನ್ನು ಬಯಸುವವರಿಗೆ ಇದು ವಿಶೇಷವಾಗಿ ಉಪಯುಕ್ತವಾಗಿದೆ.

ಹೊಸ ಬಣ್ಣದ ಕೋಡ್ ವ್ಯವಸ್ಥೆ
ಭಾರತ ಸರ್ಕಾರವು ಪಾಸ್‌ಪೋರ್ಟ್‌ಗಳಿಗೆ ಹೊಸ ಬಣ್ಣದ ಕೋಡ್ ವ್ಯವಸ್ಥೆಯನ್ನು ಪರಿಚಯಿಸಿದೆ. ಇದರಿಂದ ಪ್ರಯಾಣಿಕರ ವರ್ಗಗಳನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಸರ್ಕಾರಿ ಅಧಿಕಾರಿಗಳಿಗೆ ಬಿಳಿ ಬಣ್ಣದ ಪಾಸ್‌ಪೋರ್ಟ್, ರಾಜತಾಂತ್ರಿಕರಿಗೆ ಕೆಂಪು ಬಣ್ಣದ ಪಾಸ್‌ಪೋರ್ಟ್ ಹಾಗೂ ಸಾಮಾನ್ಯ ನಾಗರಿಕರಿಗೆ ಮೊದಲಿನಂತೆಯೇ ಕಡು ನೀಲಿ ಬಣ್ಣದ ಪಾಸ್‌ಪೋರ್ಟ್ ಮುಂದುವರಿಯಲಿವೆ.
ಈ ಹೊಸ ನಿಯಮಗಳು ಭದ್ರತೆಯನ್ನು ಹೆಚ್ಚಿಸುವುದರ ಜೊತೆಗೆ ಇಮಿಗ್ರೇಷನ್ ಚೆಕ್‌ಪಾಯಿಂಟ್‌ಗಳಲ್ಲಿ ಸುಗಮ ಗುರುತಿನ ಪರಿಶೀಲನೆ ಮತ್ತು ಪ್ರಕ್ರಿಯೆಗೆ ಸಹಕಾರಿಯಾಗುತ್ತವೆ.
ಪಾಸ್‌ಪೋರ್ಟ್ ಸೇವಾ ಕೇಂದ್ರಗಳ ವಿಸ್ತರಣೆ
ಭಾರತೀಯ ಪಾಸ್‌ಪೋರ್ಟ್ ಅರ್ಜಿ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭವಾಗಿ ಲಭ್ಯವಾಗುವಂತೆ ಮಾಡಲು, ಸರ್ಕಾರವು ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನು (POPSKs) ವಿಸ್ತರಿಸುತ್ತಿದೆ. ಮುಂದಿನ ಐದು ವರ್ಷಗಳಲ್ಲಿ POPSKಗಳ ಸಂಖ್ಯೆಯನ್ನು 442ರಿಂದ 600ಕ್ಕೆ ಹೆಚ್ಚಿಸಲಾಗುತ್ತದೆ. ಇದರಿಂದ ದೂರದ ಪ್ರದೇಶಗಳಲ್ಲಿಯೂ ಉತ್ತಮ ಸೇವೆ ಲಭ್ಯವಾಗಲಿದೆ.
