ಬೆಂಗಳೂರು: ಅಮೆರಿಕ ಪ್ರವಾಸ ಎಂದರೆ ಒಂದು ರೀತಿಯ ವಿಶೇಷ ಉತ್ಸಾಹ ಎಲ್ಲರ ಮನಸಲ್ಲೂ ಇರುತ್ತದೆ. ಈ ಉತ್ಸಾಹ ಹೆಚ್ಚಾಗಬೇಕಾದರೆ ಇಲ್ಲಿ ಕಳೆಯುವ ಪ್ರತಿಯೊಂದು ಕ್ಷಣವೂ ಸಂತೋಷದಾಯಕವಾಗಿರಬೇಕು. ಒಂದು ವೇಳೆ ಮೊದಲ ಬಾರಿ ಅಮೆರಿಕ ಪ್ರವಾಸ ಯೋಜನೆ ಹಾಕಿಕೊಳ್ಳುವಿರಿ ಎಂದಾದರೆ ಈ ಕೆಲವು ತಪ್ಪುಗಳನ್ನು ಅಪ್ಪಿತಪ್ಪಿಯೂ ಮಾಡಬೇಡಿ. ಯಾಕೆಂದರೆ ಇದು ನಿಮ್ಮ ಪ್ರವಾಸದ ಸಂತೋಷವನ್ನು ಕಿತ್ತುಕೊಳ್ಳಬಹುದು. ಸಂತೋಷದ ಕ್ಷಣ ಕಳೆಯಬೇಕಾದ ಸಮಯದಲ್ಲಿ ಮಾನಸಿಕ ಒತ್ತಡಕ್ಕೂ ಕಾರಣವಾಗಬಹುದು.
ಅಮೆರಿಕ ವಿಶಾಲ ಮತ್ತು ವೈವಿಧ್ಯಮಯ ನೋಟವನ್ನು ಒಳಗೊಂಡ ದೇಶ. ಇಲ್ಲಿಗೆ ಪ್ರವಾಸ ಮಾಡುವಾಗ ಕೆಲವೊಂದು ವಿಷಯಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು. ಇದರಿಂದ ನಿಮ್ಮ ತಪ್ಪುಗಳು ಕಡಿಮೆಯಾಗುತ್ತದೆ, ಹಣ ಉಳಿತಾಯವಾಗುತ್ತದೆ, ಹೆಚ್ಚು ಆತ್ಮವಿಶ್ವಾಸದಿಂದ ದೇಶ ಸುತ್ತಿ ಬರಬಹುದು.
ಯುಎಸ್ ಟ್ರಿಪ್ ಸ್ಥಳಗಳ ಆಯ್ಕೆ
ಅಮೆರಿಕ ಪ್ರವಾಸ ಮಾಡುವಾಗ ಇಡೀ ದೇಶವನ್ನು ಒಂದೇ ಪ್ರವಾಸದಲ್ಲಿ ಪೂರ್ಣಗೊಳಿಸಲು ಹೋಗಬೇಡಿ. ಯಾಕೆಂದರೆ ಮೊದಲೇ ಹೇಳಿದಂತೆ ಅಮೆರಿಕವು ಬಹುದೊಡ್ಡ ರಾಷ್ಟ್ರ. ಇದು ಎಲ್ಲ ಯುರೋಪ್ ದೇಶಗಳಿಗಿಂತ ದೊಡ್ಡದು. ಇಲ್ಲಿನ ಪ್ರತಿಯೊಂದು ಪ್ರದೇಶವು ವಿಶಿಷ್ಟವಾದುದು. ಒಂದು ವಾರದ ಪ್ರವಾಸ ಯೋಜನೆಯಾಗಿದ್ದರೆ ನ್ಯೂಯಾರ್ಕ್, ಲಾಸ್ ಏಂಜಲೀಸ್, ಮಿಯಾಮಿ ಮತ್ತು ಚಿಕಾಗೋಗೆ ಭೇಟಿ ನೀಡುವ ಯೋಜನೆ ಹಾಕಿಕೊಳ್ಳಲೇಬೇಡಿ. ಒಂದು ಅಥವಾ ಎರಡು ಪ್ರದೇಶಗಳನ್ನು ಮಾತ್ರ ಆಯ್ಕೆ ಮಾಡಿ. ಇದರಿಂದ ಹಣ, ಶಕ್ತಿ ಉಳಿತಾಯ ಮಾಡಬಹುದು.

ಟಿಪ್ ನೀಡೋದು ಮರೆಯಬೇಡಿ
ಅಮೆರಿಕದಲ್ಲಿ ಟಿಪ್ ನೀಡುವ ಸಂಸ್ಕೃತಿ ಇದೆ. ಇದನ್ನು ನಿರ್ಲಕ್ಷಿಸುವುದು ಸರಿಯಲ್ಲ. ಇದು ಇಲ್ಲಿನ ಸೇವಾ ಸಂಸ್ಕೃತಿಯ ಭಾಗ ಅದು. ಇಲ್ಲಿನ ರೆಸ್ಟೋರೆಂಟ್‌ಗಳು ಸಾಮಾನ್ಯವಾಗಿ ಶೇಕಡಾ 15ರಿಂದ 20ರಷ್ಟು ಟಿಪ್ ನಿರೀಕ್ಷಿಸುತ್ತವೆ. ಟ್ಯಾಕ್ಸಿ ಚಾಲಕರು, ಹೊಟೇಲ್ ಸಿಬ್ಬಂದಿ ಮತ್ತು ಸಲೂನ್ ಕೆಲಸಗಾರರು ಕೂಡ ಟಿಪ್ ಬಯಸುತ್ತಾರೆ. ಹೀಗಾಗಿ ಟಿಪ್ ನಿಮ್ಮ ಬಜೆಟ್‌ನಲ್ಲಿ ಇರಲೇಬೇಕು.
ಪ್ರಯಾಣ ವಿಮೆ ಮಾಡಿಸಿಕೊಳ್ಳಿ
ಅಮೆರಿಕದಲ್ಲಿ ಆರೋಗ್ಯ ರಕ್ಷಣೆ ಅತ್ಯಂತ ದುಬಾರಿ. ಒಂದು ಬಾರಿ ವೈದ್ಯರ ಭೇಟಿ ಮಾಡಿದರೂ ಕೂಡ ತುಂಬಾ ಎಕ್ಸ್‌ಪೆನ್ಸಿವ್ ಎನಿಸಬಹುದು. ಹೀಗಾಗಿ ವಿಮೆ ಇಲ್ಲದೇ ಇದ್ದರೆ ಪ್ರವಾಸಿಗರು ಭಾರಿ ವೈದ್ಯಕೀಯ ಬಿಲ್‌ಗಳನ್ನು ಪಾವತಿಸಬೇಕಾಗಬಹುದು. ಕೈಗೆಟಕುವ ದರದಲ್ಲಿ ಲಭ್ಯವಾಗುವ ಪ್ರಯಾಣ ವಿಮೆಯಿಂದ ತುರ್ತು ಚಿಕಿತ್ಸೆ, ಕಳೆದುಹೋದ ಸಾಮಗ್ರಿಗಳು, ತಪ್ಪಿದ ವಿಮಾನಗಳಿಗೆ ನಷ್ಟ ಪರಿಹಾರವನ್ನು ಪಡೆಯಬಹುದಾಗಿದೆ.
ಹೆಚ್ಚಿನ ಲಗೇಜ್ ತಪ್ಪಿಸಿ
ಅಮೆರಿಕ ನಗರಗಳಲ್ಲಿ ಶಾಪಿಂಗ್‌ಗೆ ಸಾಕಷ್ಟು ಅವಕಾಶಗಳಿವೆ. ಆದರೆ ಬೆಲೆ ಕೊಂಚ ದುಬಾರಿ. ಹೀಗಾಗಿ ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಬೇಡಿ. ಅಗತ್ಯ ವಸ್ತುಗಳಾದ ಯುನಿವರ್ಸಲ್ ಪವರ್ ಅಡಾಪ್ಟರ್, ಆರಾಮದಾಯಕ ವಾಕಿಂಗ್ ಶೂಗಳು, ಅಗತ್ಯ ಔಷಧಗಳು ಜತೆಗೆ ಇರಲಿ.

ಸಾರ್ವಜನಿಕ ಸಾರಿಗೆ
ಅಮೆರಿಕದಲ್ಲಿ ಸಾರ್ವಜನಿಕ ಸಾರಿಗೆಯು ನಗರದಿಂದ ನಗರಕ್ಕೆ ಬದಲಾಗುತ್ತದೆ. ಹೀಗಾಗಿ ಇವುಗಳಲ್ಲಿ ಎಚ್ಚರಿಕೆಯಿಂದ ಪ್ರಯಾಣ ಮಾಡಬೇಕು. ಅನಗತ್ಯ ದುಂದು ವೆಚ್ಚಕ್ಕೆ ಇದು ಕಾರಣವಾಗದಂತೆ ನೋಡಿಕೊಳ್ಳಿ. ನ್ಯೂಯಾರ್ಕ್ ಮತ್ತು ವಾಷಿಂಗ್ಟನ್ ಡಿ.ಸಿ. ಪರಿಣಾಮಕಾರಿ ಸಬ್‌ವೇ ವ್ಯವಸ್ಥೆಗಳನ್ನು ಹೊಂದಿವೆ. ಲಾಸ್ ಏಂಜಲೀಸ್‌ನಂತಹ ನಗರಗಳಿಗೆ ಬಹುತೇಕ ಕಾರು ಪ್ರಯಾಣದ ಅಗತ್ಯವಿರುತ್ತದೆ. ಇಲ್ಲಿ ನ್ಯಾವಿಗೇಷನ್‌ಗಾಗಿ ಗೂಗಲ್ ನಕ್ಷೆಗಳು ಮತ್ತು ಸ್ಥಳೀಯ ಅಪ್ಲಿಕೇಶನ್‌ಗಳನ್ನು ಬಳಸುವುದು ಒಳ್ಳೆಯದು. ಅನಿಯಮಿತವಾಗಿ ತಿರುಗಬೇಕಾದಾಗ ನ್ಯೂಯಾರ್ಕ್ ಮೆಟ್ರೋ ಕಾರ್ಡ್‌ನಂತಹ ಪಾಸ್‌ಗಳನ್ನು ಖರೀದಿಸುವುದು ಲಾಭದಾಯಕವಾಗುತ್ತದೆ.
ಶಿಷ್ಟಾಚಾರವನ್ನು ನಿರ್ಲಕ್ಷಿಸಬೇಡಿ
ಅಮೆರಿಕನ್ನರು ವೈಯಕ್ತಿಕ ಸ್ಥಳ ಮತ್ತು ಸಭ್ಯತೆಯನ್ನು ಗೌರವಿಸುತ್ತಾರೆ. ಹೀಗಾಗಿ ಸರತಿಯಲ್ಲಿ ನಿಂತು ಶಿಸ್ತು ಕಾಪಾಡಿಕೊಂಡು ಕಾಯುವುದನ್ನು ಮರೆಯಬೇಡಿ. ಕೆಲವೊಮ್ಮೆ ‘ಕ್ಷಮಿಸಿ’ ಎಂಬುದನ್ನು ಹೇಳಲು ಮರೆಯಬೇಡಿ. ಎತ್ತರದ ಧ್ವನಿಯಲ್ಲಿ ಮಾತನಾಡಬೇಡಿ.
ಡಾಲರ್‌ನಲ್ಲೇ ಹಣ ಬಳಕೆ
ಯುಎಸ್ ನಲ್ಲಿ ಅಧಿಕೃತ ಕರೆನ್ಸಿ ಯುಎಸ್ ಡಾಲರ್. ಇಲ್ಲಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ವ್ಯಾಪಕವಾಗಿ ಸ್ವೀಕರಿಸಲಾಗುತ್ತದೆ. ಟಿಪ್ ಮತ್ತು ಸ್ಥಳೀಯ ಸಾರಿಗೆಗಾಗಿ ಸಣ್ಣ ಪ್ರಮಾಣದ ನಗದು ಅಂದ್ರೆ ಡಾಲರ್ಸ್ ಇಟ್ಟುಕೊಳ್ಳುವುದು ಉತ್ತಮ. ಆ್ಯಪಲ್ ಪೇ ಮತ್ತು ಗೂಗಲ್ ಪೇನಂತಹ ಡಿಜಿಟಲ್ ವ್ಯಾಲೆಟ್‌ಗಳನ್ನು ಕೂಡ ಬಳಸಬಹುದು.

ಸಂವಹನ ಸುಲಭ
ಅಮೆರಿಕದಲ್ಲಿ ಮೊಬೈಲ್ ಸಂಪರ್ಕ ಮತ್ತು ಸಿಮ್ ಕಾರ್ಡ್‌ಗಳು ಸುಲಭವಾಗಿ ದೊರೆಯುತ್ತದೆ. ಇದರ ಪ್ರಯೋಜನ ಪಡೆಯಬಹದು. ಭಾರತದಿಂದ ಅಂತಾರಾಷ್ಟ್ರೀಯ ರೋಮಿಂಗ್ ದುಬಾರಿಯಾಗಿರುತ್ತದೆ. ಹೀಗಾಗಿ ಸ್ಥಳೀಯ ಸಿಮ್ ಕಾರ್ಡ್‌ಗಳು ವಿಮಾನ ನಿಲ್ದಾಣಗಳಲ್ಲಿ ಮತ್ತು ಆನ್‌ಲೈನ್‌ನಲ್ಲಿ ಲಭ್ಯವಿದೆ.
ಅಮೆರಿಕ ಪ್ಲಗ್ ಮತ್ತು ವೋಲ್ಟೇಜ್
ಅಮೆರಿಕದಲ್ಲಿ ಪ್ಲಗ್ ಟೈಪ್ A ಮತ್ತು ಟೈಪ್ B ಲಭ್ಯವಿರುತ್ತದೆ. 110 ವೋಲ್ಟೇಜ್‌ಗಳು, ಸಾರ್ವತ್ರಿಕ ಅಡಾಪ್ಟರ್ ಮತ್ತು ಅಗತ್ಯವಿದ್ದರೆ, ವೋಲ್ಟೇಜ್ ಪರಿವರ್ತಕವನ್ನು ಜತೆಗೆ ಇಟ್ಟುಕೊಳ್ಳುವುದು ಉತ್ತಮ.
ವಿಮಾನ ನಿಲ್ದಾಣ ಮತ್ತು ವಲಸೆ
ಅಂತಾರಾಷ್ಟ್ರೀಯ ನಿರ್ಗಮನಕ್ಕೆ ಕನಿಷ್ಠ ಮೂರು ಗಂಟೆಗಳ ಮೊದಲು ವಿಮಾನ ನಿಲ್ದಾಣಕ್ಕೆ ಆಗಮಿಸಬೇಕು. ಪಾಸ್‌ಪೋರ್ಟ್, ವೀಸಾ, ರಿಟರ್ನ್ ವಿಮಾನದ ವಿವರ, ಹೊಟೇಲ್ ಕಾಯ್ದಿರಿಸುವಿಕೆ, ಕಸ್ಟಮ್ಸ್ ನಿಯಮಗಳ ಪಾಲನೆ ಮುಖ್ಯ.

ತುರ್ತು ಸಂಖ್ಯೆಗಳು ಮತ್ತು ಆರೋಗ್ಯ ಸುರಕ್ಷತೆ
ತುರ್ತು ಸಂದರ್ಭಗಳಲ್ಲಿ 911 ನಂಬರ್‌ಗೆ ಡಯಲ್ ಮಾಡಿ. ಅಲ್ಲಿ ಔಷಧಾಲಯಗಳು ಮತ್ತು ತುರ್ತು ಆರೈಕೆ ಚಿಕಿತ್ಸಾಲಯಗಳು ಸುಲಭವಾಗಿ ಸಿಗುತ್ತವೆ. ಆದರೆ ತುಂಬಾ ದುಬಾರಿಯಾಗಿರುತ್ತದೆ ಎಂಬುದು ನೆನಪಿನಲ್ಲಿರಲಿ.
ತಿಳಿದಿರಬೇಕಾದ ಕಾನೂನುಗಳು
ಮದ್ಯಪಾನ ವಯಸ್ಸು 21. ಹೆಚ್ಚಿನ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ. ಸೀಟ್ ಬೆಲ್ಟ್‌ಗಳು ಕಡ್ಡಾಯ. ಕಾರು ಬಾಡಿಗೆಗೆ ಪಡೆದರೆ ಎಲ್ಲ ಸಂಚಾರ ನಿಯಮಗಳನ್ನು ಅನುಸರಿಸುವುದು ಮಸ್ಟ್.
ಬಜೆಟ್‌ನಲ್ಲಿ ಪ್ರವಾಸ
ವಿಮಾನಗಳನ್ನು ಮೊದಲೇ ಬುಕ್ ಮಾಡಿ, ನಗರ ಪಾಸ್‌ಗಳನ್ನು ಬಳಸಿ, ವಸತಿಗೆ ಹಾಸ್ಟೆಲ್‌ಗಳನ್ನು ನೋಡಬಹುದು. ಸ್ಥಳೀಯ ಆಹಾರವನ್ನು ಸೇವಿಸಿ, ಹೆಚ್ಚು ನಡಿಗೆಗೆ ಆದ್ಯತೆ ನೀಡಿ.

ಸರಿಯಾದ ವೀಸಾ ಪಡೆದುಕೊಳ್ಳಿ
ಅಮೆರಿಕಕ್ಕೆ ಭೇಟಿ ನೀಡುವ ಭಾರತೀಯ ಪ್ರವಾಸಿಗರಿಗೆ ಮಾನ್ಯವಾದ ವೀಸಾ ಅಗತ್ಯವಿದೆ. ಇದರಲ್ಲಿ ಬಿ-1 ವೀಸಾ ವ್ಯಾಪಾರ ಸಂಬಂಧಿತವಾಗಿದ್ದರೆ ಬಿ-2 ವೀಸಾ ಪ್ರವಾಸೋದ್ಯಮಕ್ಕೆ ಸಂಬಂಧಿಸಿದೆ.
ಯಾವ ಸಮಯ ಸೂಕ್ತ?
ಅಮೆರಿಕವು ಭಾರತಕ್ಕಿಂತ ದುಬಾರಿ ದೇಶ. ಇಲ್ಲಿ ವಸತಿ, ಊಟ ಮತ್ತು ಆಂತರಿಕ ಪ್ರಯಾಣ ವೆಚ್ಚಗಳು ಹೆಚ್ಚು. ಇಲ್ಲಿಗೆ ಭೇಟಿ ನೀಡಲು ಏಪ್ರಿಲ್‌ನಿಂದ ಜೂನ್ ಮತ್ತು ಸೆಪ್ಟೆಂಬರ್‌ನಿಂದ ಅಕ್ಟೋಬರ್ ಸೂಕ್ತ ಸಮಯ. ಈ ಸಂದರ್ಭದಲ್ಲಿ ಹವಾಮಾನ ಅತ್ಯಂತ ಆಹ್ಲಾದಕರವಾಗಿರುತ್ತದೆ ಮತ್ತು ಜನಸಂದಣಿ ಕಡಿಮೆ ಇರುತ್ತದೆ.
